ಮೈಸೂರು

ನಗದು ರಹಿತ ವ್ಯವಸ್ಥೆ ಮಾಡಲು ಹೋಗಿ ಜನರನ್ನು ನಗದು ರಹಿತರನ್ನಾಗಿ ಮಾಡಲಾಗುತ್ತಿದೆ :ತನ್ವೀರ್ ಸೇಠ್ ಆರೋಪ

ಕೇಂದ್ರ ಸರ್ಕಾರ ಅಂಬಾನಿ, ಅದಾನಿ, ಟಾಟಾ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ನೋಟು ನಿಷೇಧ ಮಾಡಿದ್ದು, ಇದರಿಂದ ಸಾರ್ವಜನಿಕರು ಬೀದಿಗೆ ಬಿದ್ದಿದ್ದಾರೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್  ಆರೋಪಿಸಿದರು.

ಮಂಗಳವಾರ ಮೈಸೂರಿನ ಪುರಭವನದಲ್ಲಿ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಖಂಡಿಸಿ ಆಯೋಜಿಸಿದ್ದ ಜನ ವೇದನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ನಿಯಂತ್ರಣ ಹಾಗೂ ಕಪ್ಪುಹಣವನ್ನು ವಾಪಸ್  ತರುತ್ತೇವೆ ಎಂದು 500 ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಕೇಂದ್ರ ಸರ್ಕಾರವೇ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ನೋಟು ನಿಷೇಧ ಕ್ರಮದಿಂದ ಸಾರ್ವಜನಿಕರು ಬೀದಿಗೆ ಬಿದ್ದಿರುವುದಲ್ಲದೆ ದೇಶದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ. ಸಾರ್ವಜನಿಕರಿಗೆ ತಮಗೆ ಬೇಕಾದ ಹಣ ಸಿಗುತ್ತಿಲ್ಲ. ಚಿಲ್ಲರೆ ಸಮಸ್ಯೆಯಿಂದ ಜನ ಪರದಾಡುತ್ತಿದ್ದಾರೆ. ನಗದು ರಹಿತ ಆರ್ಥಿಕ ವ್ಯವಸ್ಥೆ, ಡಿಜಿಟಲ್ ಇಂಡಿಯಾ ಮಾಡುತ್ತೇವೆ ಎಂದು ಹೇಳಿಕೊಂಡು ಎಲ್ಲರನ್ನೂ ನಗದು ರಹಿತರನ್ನಾಗಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಾರೆ. ಅವರಿಗೆ ತಂತ್ರಜ್ಞಾನದ ಅರಿವೇ ಇರುವುದಿಲ್ಲ. ಹೀಗಿರುವಾಗ ಅವರು ನಗದು ರಹಿತ ವಹಿವಾಟು ನಡೆಸುವುದಾದರೂ ಹೇಗೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ಎಟಿಎಂ, ಬ್ಯಾಂಕ್‍ಗಳಿಲ್ಲ. ಯಾರಿಗೋ ಲಾಭ ಮಾಡಿಕೊಡುವ ಉದ್ದೇಶದಿಂದ ಸಾರ್ವಜನಿಕರಿಗೆ ಈ ರೀತಿಯ ಅನ್ಯಾಯ ಮಾಡುವುದು ಯಾವ ನ್ಯಾಯ. ಅಲ್ಲದೆ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿಸುತ್ತಿದ್ದಾರೆ. ಈ ಅಧಿಕಾರವನ್ನು ಕೇಂದ್ರಕ್ಕೆ ನೀಡಿದವರು ಯಾರು. ದೇಶದಲ್ಲಿ ಕಳೆದ 60 ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಕಾಂಗ್ರೆಸ್ ಪಕ್ಷ, ಬಿಜೆಪಿಯಲ್ಲ. ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್‍ನ ಏಳಿಗೆಯನ್ನು ಸಹಿಸದೆ ಡೈರಿ ಹಗರಣ ಸೇರಿದಂತೆ ಇಲ್ಲ ಸಲ್ಲದ ಕಟ್ಟುಕತೆಗಳನ್ನು ಕಟ್ಟಿ ಜನರನ್ನು ದಾರಿತಪ್ಪಿಸುವ ಕೆಲಸದಲ್ಲಿ ಬಿಜೆಪಿ ನಿರತವಾಗಿದೆ. ಹಾಗಾಗಿ ಬಿಜೆಪಿಯ ಭ್ರಷ್ಟಾಚಾರ, ಹಗರಣ  ಹಾಗೂ ಕಾಂಗ್ರೆಸ್‍ನ ಉತ್ತಮ ಆಡಳಿತವನ್ನು ಜನರಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಎಐಸಿಸಿ ಸದಸ್ಯ ಜತ್ತಿ ಕುಸುಮ್‍ಕುಮಾರ್, ಕೆಪಿಸಿಸಿ ಸದಸ್ಯ ಎಂ.ನಾರಾಯಣಸ್ವಾಮಿ, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಮೈಲಾಕ್ ಅಧ್ಯಕ್ಷ ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್, ನಗರಾಧ್ಯಕ್ಷ ರವಿಶಂಕರ್, ಪಾಲಿಕೆ ಸದಸ್ಯ ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

comments

Related Articles

error: