ಮೈಸೂರು

ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಕೆಲಸವಾಗಬೇಕಿದೆ : ಬಿ.ಎಸ್.ಮೂರ್ತಿ

ಭಾರತ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಸಂಪ್ರದಾಯದಿಂದ  ವಿಶ್ವದ ಗಮನ ಸೆಳೆಯುತ್ತಿದ್ದು, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಕೆಲಸವಾಗಬೇಕಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ವ್ಯವಸ್ಥಾಪಕ ಬಿ.ಎಸ್.ಮೂರ್ತಿ ತಿಳಿಸಿದರು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ ವೇದಿಕೆ 2016-17, ಜಯಲಕ್ಷ್ಮಮ್ಮಣ್ಣಿ ಸ್ಮಾರಕ ರಾಜ್ಯ ಮಟ್ಟದ ಅಂತರ ಕಾಲೇಜು ಸಂಗೀತ ಸ್ಪರ್ಧೆ ಹಾಗೂ ದಿ.ಬಿ.ಸಣ್ಣೇಗೌಡ ಸ್ಮಾರಕ ಅಂತರಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯನ್ನು ಬಿ.ಎಸ್.ಮೂರ್ತಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮದು ಭಾರತೀಯ ಸಂಸ್ಕೃತಿ. ಅದನ್ನು ಉಳಿಸುವ ಕೆಲಸವಾಗಬೇಕು. ಇಂದಿನ ಜನತೆ ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಇಂದು ನೀವು ಧರಿಸಿರುವ ಬಟ್ಟೆ ನಿಜವಾಗಿಯೂ ಹೆಮ್ಮೆಯನ್ನು ಮೂಡಿಸುವಂಥದ್ದು, ಅದು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸುವ ಕೆಲಸ ನಿಮ್ಮಿಂದ ನಡೆಯಬೇಕು ಎಂದರು.

ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ದೊರಕುವ ವೇದಿಕೆಯಲ್ಲಿಯೇ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಮುಂದಾದರೆ ಯಶಸ್ಸನ್ನು ಸಾಧಿಸಬಹುದು ಎಂದು ತಿಳಿಸಿದರು.

ಕಾಲೇಜಿನಲ್ಲಿ ನಡೆದ ಸ್ಯಾರಿ ಡೇ ಪ್ರಯುಕ್ತ ವಿದ್ಯಾರ್ಥಿನಿಯರು ವಿವಿಧ ವಿನ್ಯಾಸದ ಸೀರೆಗಳಲ್ಲಿ ಮಿಂಚಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ, ಪ್ರೊ.ಬಿ.ಟಿ.ವಿಜಯ್, ಅಧ್ಯಾಪಕ ಕಾರ್ಯದರ್ಶಿ ಪ್ರೊ.ಎಚ್.ಎಂ.ಬಸವರಾಜು, ಡಾ.ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: