
ಮೈಸೂರು
ಕರಾಮುವಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಅರ್ಜಿಯನ್ನು ಉದ್ಯೋಗ ನೀಡುವ ವೇಳೆ ಪರಿಗಣಿಸದಿರಲು ಮೈಮುಲ್ ನಿರ್ಧಾರ
ಮೈಸೂರು,ಅ.31:- ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಅರ್ಜಿಯನ್ನು ಉದ್ಯೋಗ ನೀಡುವ ವೇಳೆ ಪರಿಗಣಿಸದಿರಲು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಮುಂದಾಗಿದೆ.
ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ಕೆಲದಿನಗಳ ಹಿಂದೆ ವಿವಿಧ ಉದ್ಯೋಗಗಳ ನೇಮಕಾತಿಗಾಗಿ ಅರ್ಜಿ ಕರೆದಿದೆ. ಈ ವೇಳೆ ಮುಕ್ತ ವಿವಿ ಪದವೀಧರರನ್ನು ಹೊರಗಿಟ್ಟು ನೇಮಕ ಮಾಡಿಕೊಳ್ಳಲು ಮೈಮುಲ್ ತೀರ್ಮಾನಿಸಿದೆ. ಈ ಸಂಬಂಧ ಸರಕಾರಕ್ಕೆ ಮೈಮುಲ್ ಕಳುಹಿಸಿದ್ದ ಪ್ರಸ್ತಾವನೆಯನ್ನು ಸರಕಾರ ಅನುಮೋದಿಸಿರುವುದು ವಿಶೇಷ.
ಮೈಮುಲ್ ವಿವಿಧ ವೃಂದಗಳಲ್ಲಿನ ಸಹಾಯಕ ವ್ಯವಸ್ಥಾಪಕರು, ತಾಂತ್ರಿಕ ಅಧಿಕಾರಿ, ಲೆಕ್ಕಾಧಿಕಾರಿ,ಮಾರುಕಟ್ಟೆ ಅಧಿಕಾರಿ,ಖರೀದಿ ಉಗ್ರಾಣಾಧಿಕಾರಿ,ತಾಂತ್ರಿಕ ಎಂಜಿನಿಯರಿಂಗ್, ಡೈರಿ ಸೂಪರ್ವೈಸರ್, ವಿಸ್ತರಣಾಧಿಕಾರಿ, ಲೆಕ್ಕಸಹಾಯಕ, ಮಾರುಕಟ್ಟೆ ಸಹಾಯಕ ದರ್ಜೆ -2 ಸೇರಿ ಇನ್ನಿತರ ಹುದ್ದೆಗಳ ಒಟ್ಟು 168 ಹುದ್ದೆಗಳ ನೇಮಕಕ್ಕಾಗಿ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಿತ್ತು.
ಸೆಪ್ಟಂಬರ್ 9ರಿಂದ ಅಕ್ಟೋಬರ್ 9ರವರೆಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶವಿತ್ತು. ಅದರಂತೆ ಸಾವಿರಾರು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಆಯಾಯ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ನವಂಬರ್ 2ರಿಂದ 5ರವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಪ್ರವೇಶ ಪತ್ರ ತಗೆದುಕೊಳ್ಳಲು ಹೋದವರಲ್ಲಿ ಹಲವರಿಗೆ ನಿರಾಶೆ ಕಾದಿತ್ತು. ಕಾರಣ, ಮುಕ್ತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಯ ಗುರುತಿನ ಚೀಟಿ ಬದಲಿಗೆ ತಿರಸ್ಕೃತದ ಸಂದೇಶ ರವಾನೆಯಾಗುತ್ತಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)