ಮೈಸೂರು

ಪಾಲಕರು ತಮ್ಮ ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಲು ವಿಫಲರಾಗುತ್ತಿದ್ದಾರೆ : ಎಸ್.ಸ್ವಾಮಿ ಬೇಸರ

ಮೈಸೂರು,ಅ.31:- ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರ ತರಲು ವೇದಿಕೆ ಬೇಕಷ್ಟೆ. ಪಾಲಕರು ತಮ್ಮ ಮಕ್ಕಳನ್ನು ಇಂಜಿನಿಯರ್, ಡಾಕ್ಟರ್, ವಿಜ್ಞಾನಿಗಳನ್ನಾಗಿ ಮಾಡಲು ಬಯಸುತ್ತಾರೆ. ಆದರೆ ಅವರಲ್ಲಿರುವ ಕಲೆಯನ್ನು ಗುರುತಿಸಲು ವಿಫಲರಾಗುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಅವರು ನಿನ್ನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ಬಾಲ ಭವನ ಸೊಸೈಟಿ ಸಂಯುಕ್ತಾಶ್ರಯದಲ್ಲಿ ತಿ.ನರಸೀಪರ ಪಟ್ಟಣದ ಗುರುಭವನದಲ್ಲಿ  ಹಮ್ಮಿಕೊಂಡಿದ್ದ ವಾರಾಂತ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಕಲಾಶ್ರೀ ಪ್ರಶಸ್ತಿ ಪ್ರದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಕಲೆಗೆ ಜಗತ್ತನ್ನೇ ಒಂದು ಗೂಡಿಸುವ ಶಕ್ತಿ ಇದೆ ಎಂದು ತಿಳಿಸಿದರು.

ಶಿಶು ಯೋಜನಾಭಿವೃದ್ಧಿ ಅಧಿಕಾರಿ ಬಸವರಾಜು ಮಾತನಾಡಿ  ಇಲ್ಲಿ ಮಕ್ಕಳ ಪ್ರತಿಭೆಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಉತ್ತಮ ಪ್ರತಿಭೆ ತೋರಿದ ಮಕ್ಕಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ಗಣೇಶ್  ಅಧ್ಯಕ್ಷತೆ ವಹಿಸಿದ್ದರು.  ತಾ.ಪಂ.ಸದಸ್ಯ ಶ್ರೀ ನಿವಾಸಗೌಡ, ರಂಗಸ್ವಾಮಿ, ಚಿನ್ನಮ್ಮ, ರಾಮಲಿಂಗಯ್ಯ, ರತ್ನರಾಜು, ಸಾಜಿದ್ ಅಹಮದ್, ಪುರಸಭೆ ಆರೋಗ್ಯಾಧಿಕಾರಿ ಚೇತನ್ ಕುಮಾರ್, ಕೆಂಪರಾಜು, ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: