ಮೈಸೂರು

ಕಂಪನಿಗಳ ಹಾಗೂ ಖಾಸಗಿ ಶಾಲೆಗಳ ನಾಮಫಲಕಗಳನ್ನು ಪ್ರಧಾನವಾಗಿ ಶೇ.60% ಕನ್ನಡದಲ್ಲಿ ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಅ.31:- ಮೈಸೂರಿನಲ್ಲಿರುವ ಎಲ್ಲಾ ಅಂಗಡಿ ಮಳಿಗೆ, ಕಂಪನಿಗಳ ಕಂಪನಿಗಳಧ ಹಾಗೂ ಖಾಸಗಿ ಶಾಲೆಗಳ ನಾಮಫಲಕಗಳನ್ನು ಪ್ರಧಾನವಾಗಿ ಶೇಕಡ 60 ಭಾಗ ಕನ್ನಡದಲ್ಲಿ ಕಡ್ಡಾಯವಾಗಿ ಹಾಕುವಂತೆ  ಸುತ್ತೋಲೆ ಹೊರಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಮಹಾನಗರ ಪಾಲಿಕೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕದಲ್ಲಿ ಎಲ್ಲಿ ನೋಡಿದರೂ ನಾಮಫಲಕಗಳಲ್ಲಿ ಬರೀ ಅನ್ಯ ಭಾಷೆಗಳಿವೆ. ನಮ್ಮ ಹೋರಾಟ ವೇನೆಂದರೆ ಸಂಪೂರ್ಣವಾಗಿ ಶೇಕಡ 60 ಭಾಗ ಮಳಿಗೆಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕೆಂಬ ಆದೇಶವಿದೆ, ಈ ಸರ್ಕಾರದ ನಿಯಮವನ್ನು ಜಿಲ್ಲಾಡಳಿತ ಹಾಗೂ ಮೈಸೂರು ನಗರ ಪಾಲಿಕೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ನಮ್ಮ ರಾಜಧಾನಿ ಬೆಂಗಳೂರಿನ  ನೂತನ ಮೇಯರ್ ಗೌತಮ್ ಕುಮಾರ್ ನವೆಂಬರ್ 1ರಿಂದ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ, ಶೇಕಡ 60ರಷ್ಟು ಕನ್ನಡ ಭಾಷೆಯ  ನಾಮಫಲಕ ಪ್ರದರ್ಶನ ಕಡ್ಡಾಯಗೊಳಿಸಬೇಕೆಂದು ಆದೇಶಿಸಿ, ನಿರಾಕರಿಸುವ ಮಳಿಗೆಗಳ ಉದ್ದಿಮೆ ಪರವಾನಗಿ ನೀಡದಿರುವ ನಿರ್ಧಾರಕ್ಕೆ ಬಂದಿರುವುದು ಸ್ವಾಗತಾರ್ಹ.  ಅದೇ ಮಾದರಿಯಲ್ಲಿ ನಾಳೆಯಿಂದಲೇ ಮೈಸೂರು ಮಹಾ ನಗರ ಪಾಲಿಕೆಗಳ ಆರೋಗ್ಯ ವಿಭಾಗದಿಂದ ವಾಣಿಜ್ಯ ಪರವಾನಗಿ ನೀಡುವಾಗ, ಅಂಗಡಿ ಮಳಿಗೆ, ಕಂಪನಿಗಳ ಹಾಗೂ ಖಾಸಗಿ ಶಾಲೆಗಳು ಅಳವಡಿಸಿರುವ ನಾಮ ಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಶೇಕಡ 60ರಷ್ಟು ಇರುವಂತೆ ದೃಢೀಕರಣ ಮಾಡಿಕೊಂಡು, ಸ್ಥಳ ಪರಿಶೀಲನೆ ಮಾಡಿ ನೋಡಿದ ನಂತರವಷ್ಟೇ, ನಗರಪಾಲಿಕೆ ಉದ್ದಿಮೆ ಪರವಾನಗಿ ನೀಡಬೇಕು ಅಥವಾ ನವೀಕರಣ ಮಾಡಿಕೊಡಬೇಕು. ಕನ್ನಡ ನಾಮಫಲಕ ಪ್ರಧಾನವಾಗಿ ದೊಡ್ಡಕ್ಷರಗಳಲ್ಲಿ ಅಗ್ರಸ್ಥಾನದಲ್ಲಿ ಇಲ್ಲದಿದ್ದರೆ ಉದ್ದಿಮೆ ಪರವಾನಿಗೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು ನಗರಪಾಲಿಕೆ ಮೇಯರ್ ಹಾಗೂ ಆಯುಕ್ತರು ಈ ಸುತ್ತೋಲೆಯನ್ನು ಕಡ್ಡಾಯವಾಗಿ ಈ ಕೂಡಲೇ ಹೊರಡಿಸಿ,  ನಮ್ಮ ಕನ್ನಡ ನಾಮಫಲಕಗಳ ಅಭಿಯಾನ ದ ಜೊತೆಗಿದ್ದು,  ಮೈಸೂರಿನಲ್ಲಿ ಸಂಪೂರ್ಣವಾಗಿ ಶೇಕಡ 60 ಭಾಗ ಅಂಗಡಿ ಮಳಿಗೆಗಳ ನಾಮಪಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕೆಂಬ ಆದೇಶವನ್ನು ಮತ್ತಷ್ಟು ಬಲಪಡಿಸಿ, ಕನ್ನಡವನ್ನು ಬಳಸಿ, ಬೆಳೆಸಲು  ಸಹಕರಿಸಬೇಕು.  ಪ್ರಧಾನವಾಗಿ ಕನ್ನಡದಲ್ಲಿ ನಾಮಫಲಕ ಇದ್ದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ   ಎಂದು ಎಚ್ಚರಿಸುತ್ತ  ಮಹಾಪೌರ ರಿಗೆ ಮನವಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಶಾಂತಮೂರ್ತಿ, ವಿಜಯೇಂದ್ರ, ಪ್ರಭುಶಂಕರ್ ಎಂ ಬಿ, ಡಾ. ಶಾಂತರಾಜೇಅರಸ್, ಗುರೂಶಂಕರ್, ಅಕ್ಷಯ್, ಕುಮಾರ್ ಗೌಡ, ಸ್ವಾಮಿ, ನಂದ ಕುಮಾರ್, ಪರಿಸರ ಚಂದ್ರು, ಮಿನಿ ಬಂಗಾರಪ್ಪ, ವಂದನಾ, ಮೊಗಣ್ಣಾಚಾರ್, ವಿನೋದ್ ಪಿ, ಗುರುಮಲ್ಲಪ್ಪ ಕೆಸಿ, ಆನಂದ್, ದರ್ಶನ್ ಗೌಡ, ರಾಧಾಕೃಷ್ಣ, ಕಲೀಂ, ನಾಜೀರ್, ಹರ್ಷ, ನಂಜುಂಡಸ್ವಾಮಿ, ದೀಪಕ್, ಪ್ರದೀಪ್,  ಚೆಲುವರಾಜ್, ದೂರ ಸುರೇಶ್, ನಾಜೀರ್ ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: