ಪ್ರಮುಖ ಸುದ್ದಿ

ಜನ ಸೂಚಿಸಿದಲ್ಲಿ ಕಂದಾಯ ಕಚೇರಿ ಇರಲಿ : ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಒತ್ತಾಯ

ರಾಜ್ಯ( ಮಡಿಕೇರಿ) ಅ.31 : – ಸರ್ಕಾರಿ ಕಚೇರಿಗಳು ಜನಹಿತ ಕಾಪಾಡುವ ರೀತಿ ಕಾರ್ಯನಿರ್ವಹಿಸಬೇಕೆ ಹೊರತು ತೊಂದರೆ ನೀಡುವ ರೀತಿಯಲ್ಲ. ಆದರೆ ಜನರ ವಿರೋಧದ ನಡುವೆಯೂ ಕಂದಾಯ ಪರಿವೀಕ್ಷಕರ ಕಚೇರಿಯನ್ನು ದೂರದ ವಾರ್ತಾಭವನದ ಬಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಈ ನಿರ್ಧಾರವನ್ನು ಜಿಲ್ಲಾಡಳಿತ ತಕ್ಷಣ ಕೈಬಿಡಬೇಕೆಂದು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ಮಾಧ್ಯಮ ಹೇಳಿಕೆ ನೀಡಿರುವ ವೇದಿಕೆ ಅಧ್ಯಕ್ಷ ರವಿಗೌಡ ಸಾರ್ವಜನಿಕರು ಸೂಕ್ತ ಸ್ಥಳವನ್ನು ಸೂಚಿಸಿ ಸಲಹೆ ನೀಡಿದ್ದರೂ ಇದನ್ನು ಸ್ವೀಕರಿಸದ ಜಿಲ್ಲಾಡಳಿತ ಹಾಗೂ ಕಂದಾಯ ಅಧಿಕಾರಿಗಳು ತಮಗೆ ಇಚ್ಛೆ ಬಂದಂತೆ ವರ್ತಿಸಿ ಗ್ರಾಮೀಣ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಡಿಕೇರಿ ಹೋಬಳಿ ಕಂದಾಯ ಕಚೇರಿಗೆ ಮಕ್ಕಂದೂರು, ಗಾಳಿಬೀಡು, ಮಡಿಕೇರಿ ನಗರ, ಮರಗೋಡು, ಮೂರ್ನಾಡು, ಸಂಪಾಜೆ, ನಾಪೋಕ್ಲು ಗ್ರಾಮಗಳಿಂದ ಸಾರ್ವಜನಿಕರು ಆಗಮಿಸುತ್ತಾರೆ. ಈ ಪ್ರದೇಶ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ್ದು, ಬಸ್ಸಿನ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಆದ್ದರಿಂದ ಬಡ ಗ್ರಾಮಸ್ಥರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ತಹಶೀಲ್ದಾರ್ ಕಚೇರಿ ಬಳಿ ಅಥವಾ ತಾಲ್ಲೂಕು ಪಂಚಾಯತ್ ಸಮೀಪದ ಕಟ್ಟಡಕ್ಕೆ ಕಂದಾಯ ಕಚೇರಿಯನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.
ಕಂದಾಯ ಕಚೇರಿಯಲ್ಲಿ ಕಡತ ವಿಲೇವಾರಿ ವಿಳಂಬವಾಗುತ್ತಿದ್ದು, ಅರ್ಜಿದಾರರು ನಿತ್ಯ ಅಲೆದು ಬೇಸತ್ತಿದ್ದಾರೆ. ಈ ಕಚೇರಿಯ ನ್ಯೂನತೆಗಳನ್ನು ಸರಿ ಪಡಿಸದಿದ್ದಲ್ಲಿ ಮತ್ತು ಜನರು ಸೂಚಿಸಿದ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸದಿದ್ದಲ್ಲಿ ಎಲ್ಲರ ಸಹಕಾರ ಪಡೆದು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ರವಿಗೌಡ ಎಚ್ಚರಿಕೆ ನೀಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: