ಪ್ರಮುಖ ಸುದ್ದಿ

ರಾಷ್ಟ್ರೀಯ ಏಕತಾ ದಿನ : ಪ್ರತಿಜ್ಞಾ ವಿಧಿ ಸ್ವೀಕಾರ

ರಾಜ್ಯ(ಮಡಿಕೇರಿ) ಅ.31 :- ಕೇಂದ್ರದ ಪ್ರಥಮ ಗೃಹ ಸಚಿವರಾದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ‘ರಾಷ್ಟ್ರೀಯ ಏಕತಾ ದಿನ’ವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ವಕೀಲರಾದ ನಿರಂಜನ ಇತರರು ಕಾರ್ಯಕ್ರಮದಲ್ಲಿ ದೀಪ ಬೆಳಗಿ, ನಂತರ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಪ್ರತಿಜ್ಞಾ ವಿಧಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ಬೋಧಿಸಿದರು. ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ಅರ್ಪಿಸಿಕೊಳ್ಳುತ್ತೇನೆ ಮತ್ತು ದೇಶ ಬಾಂಧವರಲ್ಲಿ ಈ ಸಂದೇಶವನ್ನು ಸಾರಲು ಶ್ರಮಿಸುತ್ತೇನೆ ಎಂದು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ.
ಸರ್ದಾರ್ ವಲ್ಲಭಬಾಯ್ ಪಟೇಲ್‍ರವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ನನ್ನದೇ ಆದ ಕೊಡುಗೆ ನೀಡುತ್ತೇನೆ ಎಂದು ಒಮ್ಮನಸ್ಸಿನಿಂದ ಪ್ರತಿಜ್ಞೆ ಮಾಡುತ್ತಿದ್ದೇನೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ವಕೀಲರಾದ ನಿರಂಜನ ಅವರು ಮಾತನಾಡಿ 20ನೇ ಶತಮಾನದ ಮಹಾನ್ ಚೇತನರಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರು ಸಹ ಒಬ್ಬರು ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ 500 ಕ್ಕೂ ಹೆಚ್ಚು ಪ್ರಾಂತ್ಯ ಹೊಂದಿದ್ದ ರಾಷ್ಟ್ರವನ್ನು ಒಗ್ಗೂಡಿಸಿ ಭಾಷಾವಾರು ರಾಜ್ಯ ವಿಂಗಡನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕಾರ್ಯ ಶ್ಲಾಘನೀಯ ಎಂದು ಅವರು ಸ್ಮರಿಸಿದರು.
ಇತಿಹಾಸದ ಘಟನೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ರಾಷ್ಟ್ರದ ಸುಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕಾರ್ಯ ಮೆಚ್ಚಬೇಕು. ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಕಾರ್ಯವನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದರು.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಆದರ್ಶಗಳನ್ನು ಯುವಜನರು ತಿಳಿದುಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆಂಚಪ್ಪ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ನಿರೂಪಿಸಿ, ವಂದಿಸಿದರು.
ಐಕ್ಯತಾ ಓಟ
‘ರಾಷ್ಟ್ರೀಯ ಏಕತಾ ದಿನ’ದ ಪ್ರಯುಕ್ತ ಜಿಲ್ಲಾ ಪೊಲೀಸ್ ವಿಭಾಗದಿಂದ ನಗರದಲ್ಲಿ ಐಕ್ಯತಾ ಓಟ ಜರುಗಿತು. ನಗರದ ರಾಜಾಸೀಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಐಕ್ಯತಾ ಓಟಕ್ಕೆ ಚಾಲನೆ ನೀಡಿದರು.
ಐಕ್ಯತಾ ಓಟವು ನಗರದ ರಾಜಾಸೀಟಿನಿಂದ ಆರಂಭವಾಗಿ ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತ ಮೂಲಕ ಕೋಟೆಗೆ ಆಗಮಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಪ್ರತಿಜ್ಞಾ ವಿಧಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್ ಅವರು ಬೋಧಿಸಿದರು.
ಡಿವೈಎಸ್‍ಪಿ ದಿನೇಶ್ ಕುಮಾರ್, ಪ್ರೆಸ್‍ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಗ್ರೀನ್ ಸಿಟಿ ಫೋರಂ ಸ್ಥಾಪಕ ಅಧ್ಯಕ್ಷರಾದ ಸತ್ಯ, ಅಧ್ಯಕ್ಷರಾದ ಜಯ ಚಿಣ್ಣಪ್ಪ, ಅಂಬೆಕಲ್ ನವೀನ್, ಕೆ.ಟಿ.ಬೇಬಿಮ್ಯಾಥ್ಯು, ಜಿಲ್ಲಾ ಶಸಸ್ತ್ರ ಮೀಸಲು ಪೊಲೀಸ್ ಪಡೆಯ ಅಧಿಕಾರಿ ಸಿದ್ದಯ್ಯ, ಪೊಲೀಸ್ ಅಧಿಕಾರಿಗಳಾದ ದಿವಾಕರ, ಅನೂಪ್ ಮಾದಪ್ಪ, ಮೇದಪ್ಪ, ರೋಟರಿ, ಲಯನ್ಸ್ ಸಂಸ್ಥೆಯ ಪ್ರತಿನಿಧಿಗಳು ಇತರರು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: