ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 30 ಮಂದಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನ

ಮೈಸೂರು,ನ.2:-  ಸಾಂಸ್ಕೃತಿಕ ನಗರಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 30 ಮಂದಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಕಲಾಮಂದಿರದಲ್ಲಿ ನಿನ್ನೆ  ಜಿಲ್ಲಾಡಳಿತವು ಆಯೋಜಿಸಿದ್ದ 64ನೇ ಜಿಲ್ಲಾಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಕನ್ನಡ ನೆಲೆ ಮತ್ತು ಭಾಷೆ ಬಗೆಗಿನ ಅಭಿಮಾನವು ಪ್ರಚಾರ ಹಾಗೂ ನವೆಂಬರ್‌ ತಿಂಗಳಿಗೆ ಸೀಮಿತವಾಗ ಬಾರದು. ಕನ್ನಡ ಭಾಷೆಯ ಅಭಿಮಾನದೊಂದಿಗೆ ನಾಡು, ನುಡಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆ ರಕ್ಷಣೆಗೆ ಸದಾ ಮುಂದಾಗಬೇಕು ಎಂದರು.

ನಗರದ ದೇವರಾಜ ಅರಸು ರಸ್ತೆ, ಸಯ್ಯಾಜಿ ರಾವ್‌ ರಸ್ತೆ ಸೇರಿದಂತೆ ಹಲವೆಡೆಗಳಲ್ಲಿರುವ ವಾಣಿಜ್ಯ ಮಳಿಗೆಗಳು, ಅಂಗಡಿ ಹಾಗೂ ಖಾಸಗಿ ಶಾಲೆಗಳ ನಾಮಫಲಕಗಳಲ್ಲಿಕಡ್ಡಾಯವಾಗಿ ಶೇ.60 ರಷ್ಟು ಕನ್ನಡವನ್ನು ಬಳಕೆ ಮಾಡಲು ಸೂಚನೆ ನೀಡಲಾಗಿದೆ. ಒಂದು ವೇಳೆ ಪಾಲಿಕೆ ಆದೇಶವನ್ನು ಪಾಲಿಸದಿದ್ದವರ ಪರವಾನಗಿ ಯನ್ನು ರದ್ದುಪಡಿಸುವ ನಿರ್ಧಾರವನ್ನು ಮುಂದಿನ ದಿನಗಳಲ್ಲಿಕೈಗೊಳ್ಳಲಾಗು ವುದು ಎಂದು ಎಚ್ಚರಿಕೆ ನೀಡಿದರು.

ಬೇರೆ ರಾಜ್ಯಗಳಲ್ಲಿ ಎಲ್ಲಾ ನಾಮಫಲಕ ಗಳಲ್ಲಿ ಅವರ ಭಾಷೆಯೇ ಪ್ರಧಾನವಾಗಿ ರುತ್ತದೆ. ಇಂಗ್ಲಿಷ್‌ ಅಕ್ಷರಗಳು ಚಿಕ್ಕದಾಗಿರುತ್ತದೆ. ಅವರು ತಮ್ಮ ಭಾಷೆಗೆ ತೋರುವ ಅಭಿಮಾನ ನಮಗೆ ಮಾದರಿಯಾಗಬೇಕಿದೆ. ಕನ್ನಡಿಗರು ಬಹಳ ಉದಾರವಾದಿಗಳಾಗಿದ್ದು, ಎಲ್ಲರನ್ನು ಒಳಗೊಳ್ಳುವ ಮತ್ತು ಸಹಿಸಿಕೊಳ್ಳುವ ಮನೋಭಾವ ನಮ್ಮಲ್ಲಿದೆ. ಹೀಗಾಗಿಯೇ ಬೆಂಗಳೂರು ಇಂದು ಮಿನಿ ಇಂಡಿಯಾ ಆಗಿದೆ. ಕನ್ನಡ ನಾಡು, ನುಡಿ, ನೆಲೆಗೆ ಹೋರಾಡಿದ ನಮ್ಮ ಹಿರಿಯರನ್ನು ಸ್ಮರಿಸುವುದು ಅಗತ್ಯ ಎಂದು ತಿಳಿಸಿದರು.

ಜಿಲ್ಲಾಪಂಚಾಯಿತಿ ಸಿಇಒ ಕೆ.ಜ್ಯೋತಿ ಮಾತನಾಡಿ, ರಾಜ್ಯೋತ್ಸವವು ಕನ್ನಡ ಕಟ್ಟಾಳುಗಳನ್ನು ನೆನಪಿಸಿಕೊಳ್ಳುವಂತಹ ಕಾರ್ಯಕ್ರಮವಾಗಿದೆ. ಕನ್ನಡನಾಡು, ನುಡಿಗೆ ಶ್ರಮಿಸಿದವರನ್ನು ನೆನೆಯುವುದರ ಜೊತೆಗೆ ನಾಡು ನುಡಿಗಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಲು ಇದು ಉತ್ತಮ ಅವಕಾಶ. ಕನ್ನಡ ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುವವರನ್ನು ಪ್ರೋತ್ಸಾಹಿಸುವುದು ಅಗತ್ಯ ಎಂದು ಹೇಳಿದರು.

ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಕನ್ನಡ ಧ್ವಜದಲ್ಲಿರುವ ಕೆಂಪು ಮತ್ತು ಹಳದಿ ಬಣ್ಣವು ಅರಿಶಿನ ಮತ್ತು ಕುಂಕುಮದ ಸಂಕೇತವಾಗಿದೆ. ಇಂದು ನಾಡು, ನುಡಿಗೆ ಹೋರಾಡಿದ ಎಲ್ಲಾಮಹಾನೀಯರ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿನಾವು ಸಾಗಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಸಮ್ಮೇಳನ ಹುಟ್ಟುಹಾಕಿದ ಮೈಸೂರು ಒಡೆಯರ ಕೊಡುಗೆಯೂ ಅಪಾರವಾಗಿದೆ ಎಂದು ತಿಳಿಸಿದರು. ಜಿಪಂ ಉಪ ವಿಭಾಗಾಧಿಕಾರಿ ವೆಂಕಟರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಎಚ್‌.ಚೆನ್ನಪ್ಪ ಸೇರಿದಂತೆ ವಿವಿಧ ಕನ್ನಡಪರ ಹೋರಾಟ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: