ಮೈಸೂರು

ಟಿಪ್ಪುವಿನ ಇತಿಹಾಸವನ್ನು ಪಠ್ಯದಿಂದ ತೆಗೆಯಲು ಮುಂದಾಗಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ

ಮೈಸೂರು,ನ.2:- ಟಿಪ್ಪುವಿನ ಇತಿಹಾಸವನ್ನು ಪಠ್ಯದಿಂದ ತೆಗೆಯಲು ಮುಂದಾಗಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ನಗರದ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಟಿಪ್ಪು ಸುಲ್ತಾನ್ ತಮ್ಮ ಜೀವಿತಾವಧಿಯ 48ವರ್ಷಗಳಲ್ಲಿ 9 ವರ್ಷಗಳನ್ನು ಯುದ್ಧದಲ್ಲಿಯೇ ಕಳೆದು 24 ವರ್ಷಗಳ ಕಾಲ ತನ್ನ ಆಡಳಿತಾವಧಿಯಲ್ಲಿ ಜನಪರ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಕೊಂಡಿದ್ದನ್ನು ಇತಿಹಾಸ ಪುಟಗಳಲ್ಲಿ ಕಾಣಬಹುದು. ಆದರೆ ಪೂರ್ವಾಗ್ರಹ ಪೀಡಿತವಾದ ಸನಾತನವಾದಿಗಳ ಹಾಗೂ ಸಂಘ ಪರಿವಾರದ ಕಪಿಮುಷ್ಠಿಗೆ ಸಿಲುಕಿರುವ ಬಿಜೆಪಿ ಸರ್ಕಾರವು ಅನಾವಶ್ಯಕವಾಗಿ ಟಿಪ್ಪುವನ್ನು ಆಧಾರರಹಿತವಾಗಿ ದ್ವೇಷಿಸುತ್ತ ಒಂದು ಸಮುದಾಯವನ್ನು ಸಮಾಜದಿಂದ ದೂರವಿಡುವ ವಿಲನ್ ಗಳಾಗಿ ಚಿತ್ರಿಸುವ ಹುನ್ನಾರ ಹೊಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲದೇ ರಾಷ್ಟ್ರೀಯ ಪಠ್ಯಪುಸ್ತಕ ನೀತಿ ನಿಯಮಗಳಿಗನುಗುಣವಾಗಿ ಇದುವರೆಗೆ ಇದ್ದಂತಹ ಟಿಪ್ಪುವಿನ ಪಾಠವನ್ನು ಪಠ್ಯ ಪುಸ್ತಕದಿಂದ ತೆಗೆಯಲು ಬಿಜೆಪಿ ಸರ್ಕಾರ ಮುಂದಾಗಿರುವುದು ಖಂಡನೀಯ. ಟಿಪ್ಪುವಿನ ಇತಿಹಾಸವನ್ನು ಪಠ್ಯದಿಂದ ಹೊರತೆಗೆದು ಅಪೂರ್ಣ ಇತಿಹಾಸವನ್ನು ದಾಖಲಿಸಿ ನೈಜ ಇತಿಹಾಸಕ್ಕೆ  ದ್ರೋಹವೆಸಗುವ ಕ್ರಮದಿಂದ ದೂರವುಳಿಯಲು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಆಲ್ತೂರು  ಶಿವರಾಜು, ಗೋವಿಂದ ರಾಜು, ಅರಸಿನಕೆರೆ ಶಿವರಾಜು, ಮೈಸೂರು ಸೋಮನಾಯ್ಕ್, ನಂಜನಗೂಡು ಶಿವಮೂರ್ತಿ, ಗೊದ್ದನಪುರ ಮಾದೇಶ, ರಹೀಂ, ದೊರೆಸ್ವಾಮಿ, ಮಹೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: