ಪ್ರಮುಖ ಸುದ್ದಿಮನರಂಜನೆ

ಸೂಪರ್ ಸ್ಟಾರ್ ರಜನಿಕಾಂತ್ ಗೆ ಪ್ರತಿಷ್ಠಿತ ಗೋಲ್ಡನ್ ಜುಬಿಲಿ ಅವಾರ್ಡ್

ನವದೆಹಲಿ,ನ.2-ಸೂಪರ್ ಸ್ಟಾರ್ ರಜನಿಕಾಂತ್ ಗೆ ಪ್ರತಿಷ್ಠಿತ 2019ರ ಗೋಲ್ಡನ್ ಜುಬಿಲಿ ಅವಾರ್ಡ್ ಅನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್(ಇಫಿ)ನಲ್ಲಿ ಈ ಪ್ರಶಸ್ತಿಯನ್ನು ರಜನಿಕಾಂತ್ ಅವರಿಗೆ ಪ್ರದಾನ ಮಾಡಲಾಗುವುದು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ನಟ ರಜನಿಕಾಂತ್ ಅವರಿಗೆ ಪ್ರಶಸ್ತಿ ನೀಡುತ್ತಿರುವ ಸುದ್ದಿಯನ್ನು ಟ್ವೀಟ್ ಮೂಲಕ ಘೋಷಿಸಿದ್ದರು. ಕೆಲವು ದಶಕಗಳ ಕಾಲ ಭಾರತೀಯ ಸಿನಿಮಾರಂಗಕ್ಕೆ ರಜನಿಕಾಂತ್ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ರಜನಿಕಾಂತ್ ನನ್ನ ಗುರುತಿಸಿ ಗೋವಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರತಿಷ್ಠಿತ ಗೋಲ್ಡನ್ ಜುಬಿಲಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವ ಭಾರತ ಸರ್ಕಾರಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಮೂಲತಃ ಕನ್ನಡಿಗರಾಗಿರುವ ರಜನಿಕಾಂತ್ 1975ರಲ್ಲಿ ನಿರ್ದೇಶಕ ಬಾಲಚಂದ್ರ ಅವರ ಅಪೂರ್ವ ರಾಗಂಗಳ್ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಈ ಸಿನಿಮಾದಲ್ಲಿ ರಜನಿಕಾಂತ್ ಅವರು ನಿರ್ವಹಿಸಿದ್ದ ಸಣ್ಣ ಪಾತ್ರದಿಂದಲೇ ಎಲ್ಲರ ಗಮನಸೆಳೆದಿದ್ದರು. ಹೀಗೆ ಆರಂಭವಾದ ರಜನಿಕಾಂತ್ ಅವರ ಸಿನಿಪಯಣದಿಂದ ತಮಿಳುನಾಡು ಮಾತ್ರವಲ್ಲ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಭಿನ್ನ ಸ್ಟೈಲ್ ಹಾಗೂ ನಟನೆಯ ಮೂಲಕ ಇಂದು ಸೂಪರ್ ಸ್ಟಾರ್ ಆಗಿದ್ದಾರೆ. (ಎಂ.ಎನ್)

Leave a Reply

comments

Related Articles

error: