ಕ್ರೀಡೆ

ಧೋನಿಯ ಇದೊಂದು ದಾಖಲೆಯನ್ನು ಕೊಹ್ಲಿ ಮುರಿಯಲು ಸಾಧ್ಯವಿಲ್ಲ

ನವದೆಹಲಿ: ಭಾರತ ತಂಡದ ನಾಯಕರಾಗಿದ್ದಾಗ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿ ಹಲವು ದಾಖಲೆಗಳಿವೆ. ಟೀಂ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ಕೂಡ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ನಾಯಕ.

ಆದರೆ ಧೋನಿಯವರ ಹೆಸರಿನಲ್ಲಿ ಒಂದು ವಿಶಿಷ್ಟ ದಾಖಲೆ ಇದೆ. ಆ ದಾಖಲೆ ಮುರಿಯುವ ಅವಕಾಶವನ್ನು ವಿರಾಟ್ ಕಳೆದುಕೊಂಡಿದ್ದಾರೆ.

ಅದೇನಪ್ಪ ಅಂದ್ರಾ? ತವರಿನಲ್ಲಿ ಧೋನಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯವನ್ನೂ ಸೋತಿಲ್ಲ. ಆದರೆ ವಿರಾಟ್ ಕೊಹ್ಲಿ ನೇತೃತ್ವದ ತಂಡ  ಒಂದು ಪಂದ್ಯವನ್ನು ಸೋತಿದೆ. ಹೀಗಾಗಿ ಈ ವಿಶಿಷ್ಟ ದಾಖಲೆಯನ್ನು ಕೊಹ್ಲಿ ಮುರಿಯಲು ಸಾಧ್ಯವೇ ಇಲ್ಲ. ತವರಿನಲ್ಲಿ ನಡೆದ ಸತತ 19 ಟೆಸ್ಟ್ ಪಂದ್ಯಗಳ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ನೇತೃತ್ವದ ತಂಡ ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ 333 ರನ್ ಗಳ ಹೀನಾಯ ಸೋಲು ಅನುಭವಿಸಿತ್ತು.

ಈ ವರೆಗೂ ಧೋನಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 8 ಪಂದ್ಯಗಳನ್ನು ಗೆದ್ದಿದ್ದಾರೆ. 2008/09ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡವನ್ನು ಭಾರತ 2-0 ಅಂತರದಲ್ಲಿ ಮಣಿಸಿತ್ತು. ಬಳಿಕ 2010-11 ರಲ್ಲಿ ಮತ್ತೆ 2-0 ಅಂತರದಲ್ಲಿ ಮಣಿಸಿ ಸರಣಿ ತನ್ನದಾಗಿಸಿಕೊಂಡಿತ್ತು. ಇನ್ನು 2012-13 ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ಬರೊಬ್ಬರಿ 4-0 ಅಂತರದಲ್ಲಿ ಹೀನಾಯವಾಗಿ ಮಣಿಸಿತ್ತು. ಇದೇ ಸರಣಿಯಲ್ಲಿ ಧೋನಿ ದ್ವಿಶತಕ ಬಾರಿಸಿದ್ದರು.

ಪ್ರಸ್ತುತ ಭಾರತ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ತಂಡ 4 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಬೆಂಗಳೂರು ಐಪಿಎಲ್ ಮೂಲಕ ಕೊಹ್ಲಿಯ ಎರಡನೇ ತವರಾಗಿದೆ. ಇಲ್ಲಿ ಕೊಹ್ಲಿ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು.

Leave a Reply

comments

Related Articles

error: