ಪ್ರಮುಖ ಸುದ್ದಿ

13 ಸಂತ್ರಸ್ತ ಕುಟುಂಬಗಳಿಗೆ ಮನೆಗಳ ನಿರ್ಮಾಣ : ಇತರರಿಗೆ ಮಾದರಿಯಾದ ಕೊಡಗು ರಿಲೀಫ್ ಸೆಲ್

ರಾಜ್ಯ(ಮಡಿಕೇರಿ) ನ.2 : – ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ವಿವಿಧ ಜಾತಿ ಮತ್ತು ಧರ್ಮದ ಸುಮಾರು 13 ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಜಮಾಅತೇ ಇಸ್ಲಾಮಿ ಹಿಂದ್‌ನ ಸಮಾಜ ಸೇವಾ ವಿಭಾಗವಾದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ಕೊಡಗು ಜಿಲ್ಲಾ ಘಟಕ ಇತರರಿಗೆ ಮಾದರಿಯಾಗಿದೆ. ಕೊಡಗು ರಿಲೀಫ್ ಸೆಲ್ ವತಿಯಿಂದ ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ 13 ಮನೆಗಳನ್ನು ನ.5 ರಂದು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಜಮಾಅತೇ ಇಸ್ಲಾಮಿ ಹಿಂದ್‌ನ ಮಂಗಳೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಂ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾನಿಗಳ ನೆರವಿನಿಂದ ಮಡಿಕೇರಿ ನಗರದ ತ್ಯಾಗರಾಜ ನಗರದಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ 8ಮನೆಗಳನ್ನು ಹಾಗೂ ಸಿದ್ದಾಪುರದ ಎಂ.ಜಿ.ರಸ್ತೆಯಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ 5 ಮನೆಗಳನ್ನು ಅಂದು ರಾಜ್ಯದ ವಸತಿ ಸಚಿವ ವಿ.ಸೋಮಣ್ಣ ಅವರು ಹಸ್ತಾಂತರಿಸಲಿದ್ದಾರೆ ಎಂದು ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್‌ನ ಸಮಾಜಸೇವಾ ವಿಭಾಗವಾಗಿರುವ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಕಳೆದ ಒಂದು ದಶಕದಿಂದೀಚೆಗೆ ರಾಜ್ಯದ 8 ವಲಯಗಳಲ್ಲಿ ಸಮಾಜಸೇವಾ ಕೆಲಸ ನಿರ್ವಹಿಸುತ್ತಾ ಬಂದಿದೆ. 50ಕ್ಕೂ ಹೆಚ್ಚು ಗುಂಪುಗಳಲ್ಲಿ 500ಕ್ಕಿಂತಲೂ ಹೆಚ್ಚು ಕಾರ್ಯಕರ್ತರುಗಳನ್ನು ಹೊಂದಿದೆ. ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗುವಂತಹ ಪರಿಣತಿ ಹೊಂದಿರುವ ಕಾರ್ಯಕರ್ತರನ್ನು ಸಂಘಟನೆಯು ಹೊಂದಿದ್ದು,   ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರಿಗೆ ತರಬೇತಿಯನ್ನೂ ನೀಡುತ್ತಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ದಾನಿಗಳ ನೆರವಿನಿಂದ ಇದುವರೆಗೆ ಸುಮಾರು 60ಲಕ್ಷ ರೂ.ಗಳ ನೆರವನ್ನು ನೀಡಲಾಗಿದೆ ಎಂದು ತಿಳಿಸಿದ ಅವರು, ಇದೀಗ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿರುವ ಚೋಂದಮ್ಮ, ಅಪ್ಸರಾ, ರಝಿಯಾ, ಝರೀನಾ, ವಿಜಯ, ಅಶ್ರಫ್, ಉಮ್ಮರ್ ಹಾಗೂ ಫಿಲೋಮಿನಾ ಎಂಬವರುಗಳಿಗೆ ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿರುವ ಕಾರುಣ್ಯ ಮೊಹಲ್ಲಾದಲ್ಲಿ 8 ಮನೆಗಳನ್ನು ಒದಗಿಸಲಾಗುತ್ತಿದೆ. ಇದಲ್ಲದೆ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಸುಶಾಂತ್ ಎಂಬವರಿಗೆ ಆಟೋರಿಕ್ಷಾ ಹಾಗೂ ಪ್ರಕಾಶ್ ಎಂಬವರಿಗೆ ಪರಿಕರಗಳನ್ನು ಒದಗಿಸಲಾಗಿದೆ ಎಂದು ಯು.ಅಬ್ದುಸ್ಸಲಾಂ ತಿಳಿಸಿದರು.

ಸ್ವಾಗತ ಸಮಿತಿ ಸಂಚಾಲಕ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ನವೆಂಬರ್ 5ರ ಪೂರ್ವಾಹ್ನ 11ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಮನೆಗಳನ್ನು ಹಸ್ತಾಂತರಿಸಲಿದ್ದು, ಜಮಾಅತೇ ಇಸ್ಲಾಮಿ ಹಿಂದ್‌ನ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಯೂಸುಫ್ ಕನ್ನಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ  ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ   ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ .ಸುಮನ್ ಡಿ. ಪೆನ್ನೇಕರ್, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ನೂರುನ್ನಿಸಾ, ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ  ಮುಹಮ್ಮದ್ ಕುಂಞ, ಕೆ.ಬಾಡಗ ಗ್ರಾಮ ಪಂಚಾಯ್ತಿ ಅಧ್ಯಕ್ಷೆ   ರೀಟಾ ಮುತ್ತಣ್ಣ, ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯದ ಸಹ ಕಾರ್ಯದರ್ಶಿ ಕೆ.ಸಾದಿಕ್ ಉಳಿಯಿಲ್, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕದ  ನಿರ್ದೇಶಕ ಕೆ.ಎಂ.ಅಶ್ರಫ್ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ ಎಂದರು.

ಅಂದು ಸಂಜೆ 4 ಗಂಟೆಗೆ ಸಿದ್ದಾಪುರದಲ್ಲಿ 5 ಮಂದಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹೆಮಾನ್, ಸಾರ್ವಜನಿಕ ಸಂಪರ್ಕ ವಿಭಾಗದ ಸಂಚಾಲಕ ಸಿ.ಹೆಚ್.ಅಫ್ಸರ್, ಸ್ಥಾನೀಯ ಅಧ್ಯಕ್ಷ ಜಿ.ಹೆಚ್.ಮುಹಮ್ಮದ್ ಹನೀಫ್ ಹಾಗೂ ತಣಲ್ ಆಶ್ರಯ ಕೇಂದ್ರದ ವ್ಯವಸ್ಥಾಪಕ ಮುಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: