ಮೈಸೂರು

ಸಾಮಾಜಿಕ ಕಳಕಳಿ ಹೊಂದಿದ್ದ ಚಳವಳಿಗಳು ಸತ್ತು ಹೋಗಿದ್ದು, ಸಮಾಜಕ್ಕೆ ಸಿಗುತ್ತಿದ್ದ  ಸಕಾರಾತ್ಮಕ  ಫಲಗಳೂ ಕಾಣೆಯಾಗಿವೆ : ಮಾಜಿ ಸಚಿವ ಎಚ್.ವಿಶ್ವನಾಥ್ ಬೇಸರ

ಮೈಸೂರು,ನ.4:- ಇಂದು ಸಾಮಾಜಿಕ ಕಳಕಳಿ ಹೊಂದಿದ್ದ ಚಳವಳಿಗಳು ಸತ್ತು ಹೋಗಿದ್ದು, ಸಮಾಜಕ್ಕೆ ಸಿಗುತ್ತಿದ್ದ  ಸಕಾರಾತ್ಮಕ  ಫಲಗಳೂ ಕಾಣೆಯಾಗಿವೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ಅವರು ನಿನ್ನೆ ಹುಣಸೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ   ದಲಿತ ಸಂಘರ್ಷ ಸಮಿತಿಯಿಂದ ಇತ್ತೀಚೆಗೆ ನಿಧನರಾದ ಪೌರಕಾರ್ಮಿಕರ  ಮುಖಂಡ ಬಾಲು ಹಾಗೂ ಆದಿಜಾಂಬವರ ಮುಖಂಡ ಬೆಳ್ತೂರು ಮಹದೇವ್ ಸ್ಮರಣಾರ್ಥ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.  5 ದಶಕಗಳ ಹಿಂದೆ ಅನ್ನ  ಮತ್ತು ಆಶ್ರಯಕ್ಕಾಗಿ ಹೋರಾಟ, ಚಳವಳಿಗಳು ನಡೆದಿತ್ತು.  ಅಂಬೇಡ್ಕರ್ ಸ್ವಾಭಿಮಾನದ ಬದುಕನ್ನು ತಿಳಿಸಿದರೆ, ಇಂದಿರಾಗಾಂಧಿ, ದೇವರಾಜ ಅರಸು ಮುಂತಾದವರು ಶೋಷಿತರ ಅನ್ನದ ದಾಹವನ್ನು ನೀಗಿಸಿದರು. ತದನಂತರ ಸ್ವಾಭಿಮಾನದ ಬದುಕಿಗಾಗಿ ಹೋರಾಟ ನಡೆಯಿತು. ದಲಿತ, ರೈತ, ವಿದ್ಯಾರ್ಥಿಗಳು, ಮಹಿಳಾ ಚಳವಳಿಗಳು ರಾಜ್ಯದ ಮತ್ತು ದೇಶದ ಸರ್ಕಾರಗಳನ್ನು ನಡುಗಿಸುವಂತಹ ಪ್ರಮಾಣದಲ್ಲಿ ನಡೆಯುತ್ತಿದ್ದವು. ಆದರೆ ಇಂದು ಚಳವಳಿಗಳೇ ಸತ್ತು ಹೋಗಿವೆ. ಇದರಿಂದಾಗಿ ಸಮಾಜಕ್ಕೆ ಸಿಗುತ್ತಿದ್ದ ಸಕಾರಾತ್ಮಕ ಫಲಗಳೂ ಕಣ್ಮರೆಯಾಗಿವೆ ಎಂದರು.

ದಲಿತ ಸೇರಿದಂತೆ ವಿವಿಧ ಸಂಘಟನೆಗಳು ಬಡವರ ಆರ್ಥಿಕಾವೃದ್ಧಿಗಾಗಿ ಹೋರಾಟ ನಡೆಸಬೇಕಿದೆ. ರಾಜಕೀಯ ಅಧಿಕಾರಕ್ಕಾಗಿ ಹೋರಾಟ ಅಗತ್ಯ. ಆರ್ಥಿಕಾಭಿವೃದ್ಧಿ ನೀಡುವ ದಿಸೆಯಲ್ಲಿ ಆಡಳಿತಗಾರರೇ ಆರ್ಥಿಕ ಅಪರಾಧಗಳ ಸುಳಿಗೆ ಸಿಲುಕಿ ಜೈಲುಪಾಲಾಗುತ್ತಿರು ವುದು ಇಂದಿನ ದುರಂತವೆಂದು ಬೇಸರ ವ್ಯಕ್ತಪಡಿಸಿದರು. ಮೃತಪಟ್ಟ ಇಬ್ಬರು ಮುಖಂಡರ ಕುಟುಂಬದವರಿಗೆ ವೈಯುಕ್ತಿಕವಾಗಿ ತಲಾ 50 ಸಾವಿರ ರೂ.ಆರ್ಥಿಕ ಸಹಕಾರ ನೀಡುವುದಾಗಿ ಘೋಷಿಸಿದ ಅವರು ದಾನಿಗಳಿಂದ ತಲಾ 50 ಸಾವಿರ ರೂ. ಕೊಡಿಸುವುದಾಗಿ ಹೇಳಿದರು.

ಈ ಸಂದರ್ಭ  ಮುಖಂಡರಾದ   ಡಿ.ಕುಮಾರ್, ಭೀಮನಹಳ್ಳಿ ಮಹದೇವ್, ಜೆ.ಮಹದೇವ್, ಸಾಯಿನಾಥ್, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್, ಲ್ಯಾಂಪ್ಸ್ ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: