
ಮೈಸೂರು
ನೀರಿನಲ್ಲಿ ಮುಳುಗಿ ಯುವಕರೀರ್ವರ ಸಾವು
ಮಡಿಕೇರಿಯ ಕುಶಾಲನಗರದ ಬಳಿ ಇರುವ ಪ್ರವಾಸಿ ತಾಣವಾದ ದುಬಾರೆಯಲ್ಲಿ ಈಜಲು ತೆರಳಿದ್ದ ಯುವಕರೀರ್ವರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕಂಬಿಬಾಣಿಯ ಗಿರಿಶ್(21), ಹಾಗೂ ದುರ್ಗಾಪ್ರಸಾದ್(19) ಎಂದು ಗುರುತಿಸಲಾಗಿದೆ. ತಮ್ಮ ಸ್ನೇಹಿತರಾದ ಸಿಬಿನ್ ಮತ್ತು ಉಮೇಶ್ ಎಂಬವರ ಜೊತೆ ದುಬಾರೆಗೆ ತೆರಳಿದ್ದ ವೇಳೆ ಕಾವೇರಿನದಿಯಲ್ಲಿ ಈಜಲು ತೊಡಗಿದ್ದರು. ಆದರೆ ಆಳ ಅರಿಯದೇ ಗಿರೀಶ್ ಮತ್ತು ದುರ್ಗಾಪ್ರಸಾದ್ ಮುಳುಗಿದ್ದಾರೆ. ನುರಿತ ಈಜುಗಾರರನ್ನು ಕೂಡಲೇ ಕರೆಸಿ ನದಿಗೆ ಇಳಿಸಲಾಯಿತಾದರೂ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಪರೀಕ್ಷೆ ನಡೆಸಿ ಕುಟುಂಬಿಕರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.