ಮೈಸೂರು

ಸಂಗೀತ ಪ್ರತಿಯೊಬ್ಬನ ಮನಸ್ಸಿಗೂ ಮುದ ನೀಡುವ ಕಲೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಬಣ್ಣನೆ

ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ : ಸಾಧಕರಿಗೆ ಸನ್ಮಾನ

ಮೈಸೂರು,ನ.4:- ಸಂಗೀತ ಪ್ರತಿಯೊಬ್ಬನ ಮನಸ್ಸಿಗೂ ಮುದ ನೀಡುವ ಕಲೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಬಣ್ಣಿಸಿದರು.

ಅವರಿಂದು ಜೆಎಲ್ ಬಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಗೀತ ಪ್ರತಿಯೊಬ್ಬನಿಗೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ಒಂದು ರೀತಿಯಲ್ಲಿ ಸಂತೋಷ, ನೆಮ್ಮದಿ ನೀಡುವ ಪ್ರಯತ್ನ. ಸಂಗೀತ ಕಲಿತಿಲ್ಲದಿರಬಹುದು. ಆದರೆ ಸಂಗೀತ ಕೇಳುವಾಗ ಏನೋ ಒಂಥರಾ ಸಂತೋಷ ಉದ್ಭವವಾಗತ್ತೆ ಎಂದರು.

ಸಂಗೀತ ದೇವರನ್ನು ಆರಾಧಿಸುವ ಕಲೆಯೂ ಕೂಡ ಹೌದು. ನಗರದ ಹೃದಯಭಾಗದಲ್ಲಿ ಈ ವಿಶ್ವವಿದ್ಯಾಲಯವಿದೆ. ರಿಂಗ್ ರೋಡ್ ನಲ್ಲಿಯೂ ವಿದ್ಯಾಸಂಸ್ಥೆ ಕಟ್ಟಲು ಜಾಗ ನೀಡಿದ್ದಾರೆ. ವಿಶ್ವವಿದ್ಯಾಲಯ ಉತ್ತಮ ಕಾರ್ಯ ನಡೆಸಿಕೊಂಡು ಬರುತ್ತಿದೆ. ಸಂಸ್ಥಾಪನಾ ದಿನಾಚರಣೆಯಲ್ಲಿ ಮುಂದೇನು ಮಾಡುತ್ತೇವೆ ಎಂಬ ಅಡಿಗೋಲನ್ನು ಇಟ್ಟುಕೊಳ್ಳಬೇಕು. ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು. ಹತ್ತು ವರ್ಷದಲ್ಲಿಯೇ ಸಂಗೀತ ವಿವಿ ಇಷ್ಟು ಬೆಳೆದಿದೆ. ಇನ್ನೂ ಎತ್ತರಕ್ಕೆ ಬೆಳೆದು ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಸಂಗೀತ ತಜ್ಞ, ನಿರ್ದೇಶಕ (NAAC) ಪ್ರೊ.ಎಸ್.ಸಿ.ಶರ್ಮಾ ಸಂಸ್ಥಾಪನಾ ದಿನಾಚರಣೆಯ ಭಾಷಣ ಮಾಡಿ ಎಲ್ಲ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಅದರಲ್ಲಿ ಸಂಗೀತ ಮತ್ತು ಪ್ರದರ್ಶನಕ ಕಲೆಗಳ ವಿಶ್ವವಿದ್ಯಾಲಯ ವಿಭಿನ್ನ. ವಿಜ್ಞಾನ ಸೇರಿದಂತೆ ಬೇರೆ ಬೇರೆ ವಿಷಯಗಳನ್ನು ಓದಿ ಮುಂದೆ ಬರಬಹುದು. ಆದರೆ ಸಂಗೀತ ಹಾಗಲ್ಲ. ನಮ್ಮೊಳಗಿಂದ ಬರಬೇಕು. ಕಲಾವಿದ ಯಾವತ್ತೂ ಎಲ್ಲರ ನೆನಪಿನಲ್ಲಿರುತ್ತಾನೆ. ಕಲೆ ದೈವದತ್ತವಾಗಿ, ಪುಣ್ಯಶೇಷವಾಗಿ ಬಂದಿರತ್ತೆ. ಕಲೆಯನ್ನು ಕಾಪಾಡಿಕೊಳ್ಳಿ. ನಿಮಗೆ ಗುರುಗಳು ಹೇಳಿದ ಪಾಠ ಬರುವವರೆಗೂ ಮನನ ಮಾಡಿ. ಸ್ವರ ಹೇಳಿಕೊಟ್ಟರೆ, ಸಾಹಿತ್ಯ ಹೇಗೆ ಜೋಡಿಸುವುದು ಎಂಬುದನ್ನು ತಿಳಿಯಿರಿ ಎಂದರು.

ನಾವೆಲ್ಲ ಕಲಿಯುವಾಗ ಒಂದು ಕೀರ್ತನೆ ಹೇಳಿಕೊಟ್ಟರೆ ಒಂದು-ಎರಡು ತಿಂಗಳು ಅದು ಸರಿಯಾಗಿ ಬರುವ ತನಕ ಮುಂದಿನ ಕೀರ್ತನೆ ಹೇಳಿಕೊಡುತ್ತಿದ್ದರು. ಅಭಿನಯ ಕೂಡ ಮುಖ್ಯ. ನಾಟಕ, ಭರತನಾಟ್ಯಗಳನ್ನು ಸತತ ಅಭ್ಯಾಸ ಮಾಡಬೇಕು. ಅಭ್ಯಾಸ ತಪ್ಪಿದರೆ ಅನುತ್ತೀರ್ಣರಾಗುತ್ತೀರಿ. ಪ್ರತಿಯೊಂದು ವೇದಿಕೆಯೂ ಪರೀಕ್ಷೆಯೇ ಆಗಿರುತ್ತದೆ. ಕಲಿಯುವಾಗ ಶುದ್ಧವಾಗಿ, ಸರಿಯಾಗಿ ಕಲಿಯಿರಿ ಎಂದರು.

ಇದೇ ವೇಳೆ ಖ್ಯಾತ ಸಂಗೀತ ಸಾಮ್ರಾಜ್ಞಿ ಡಾ.ಗಂಗೂಬಾಯಿ ಹಾನಗಲ್ ನಡೆದು ಬಂದ ಹಾದಿ, ಅವರು ಕಷ್ಟದ ಜೀವನದ ನಡುವೆಯೂ ತಮ್ಮ ಸಂಗೀತದಿಂದ ಹೇಗೆ ಪ್ರಖರ ಶಕ್ತಿಯಾಗಿ ಬೆಳೆದರು ಎಂಬುದನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕರಾಮುವಿ ವಿಶ್ರಾಂತ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ, ಖ್ಯಾತ ಹಿಂದೂಸ್ತಾನಿ ಗಾಯಕ ಡಾ.ಮುದ್ದುಮೋಹನ್, ಖ್ಯಾತ ಕರ್ನಾಟಕ ಸಂಗೀತಗಾರ ವಿದ್ವಾನ್ ವಿಜಯರಾಘವನ್, ಭರತನಾಟ್ಯ ಕಲಾವಿದೆ ವಿದುಷಿ ವಸಂತಲಕ್ಷ್ಮಿ, ರಂಗಕರ್ಮಿ ಪ್ರೊ.ಹೆಚ್.ಎಸ್.ಉಮೇಶ್, ಖ್ಯಾತ ತಬಲಾ ವಾದಕ ಪಂಡಿತ್ ರಾಚಯ್ಯ ಹಿರೇಮಠ, ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಕುಮಾರದಾಸ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಕುಲಪತಿ ಪ್ರೊ.ನಾಗೇಶ್ ಬೆಟ್ಟಕೋಟೆ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: