ಮೈಸೂರು

ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯದಿಂದ ಕೈಬಿಡುವ ಚಿಂತನೆಗೆ ಮುಂದಾಗಿರುವ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ

ಮೈಸೂರು,ನ.5:-  ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯದಿಂದ ಕೈಬಿಡುವ ಚಿಂತನೆಗೆ ಮುಂದಾಗಿದ್ದು, ಸರ್ಕಾರದ  ನಡೆ ದುರುದ್ದೇಶಪೂರ್ವಕವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಿನ್ನೆ ನಂಜನಗೂಡು ನಗರದ ಖಾಸಗಿ ಬಸ್ ನಿಲ್ದಾಣ ಬಳಿಯ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾಯಿಸಿದ ದಸಂಸ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಟಿಪ್ಪು ಸುಲ್ತಾನ್ ಸಾಧನೆಗಳನ್ನು ಬಿಂಬಿಸುವ ಗೀತೆಗಳನ್ನು ಹಾಡುವ ಮೂಲಕ ಜನರ ಗಮನ ಸೆಳೆದರು.  ಶೌರ್ಯ ಮತ್ತು ಪರಾಕ್ರಮಕ್ಕೆ ಹೆಸರಾಗಿದ್ದ ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟಗಳನ್ನು ಮಾಡುವ ಮೂಲಕ ಜಾಗತಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಮೈಸೂರು ಪ್ರಾಂತ್ಯದ ಆಡಳಿತಾವಧಿಯಲ್ಲಿ ಟಿಪ್ಪು 39 ಸಾವಿರ ಕೆರೆಗಳ ನಿರ್ಮಾಣ, 14 ಸಾವಿರ ಬಾವಿಗಳು ಮತ್ತು 24 ಸಾವಿರ ಒಡ್ಡುಗಳ ನಿರ್ಮಾಣದ ಮೂಲಕ ಕೃಷಿ ಚಟುವಟಿಕೆಗೆ ನೆರವಾಗಿದ್ದಲ್ಲದೆ ದಲಿತರನ್ನು ನೀರುಗಂಟಿಗಳಾಗಿ ನೇಮಕ ಮಾಡಿದ್ದರು. 1782ರಲ್ಲಿ ಭೂ ಸುಧಾರಣೆ ಹಾಗೂ ಕೃಷಿ ನೀತಿಯನ್ನು ಜಾರಿಗೊಳಿಸಿ ಪಾಳೆಗಾರರು ಮತ್ತು ವೈದಿಕರನ್ನು ನಿಯಂತ್ರಿಸಿದ್ದರು. ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ತನ್ನ ಆಡಳಿತಾವಧಿಯಲ್ಲಿ ತೊಡೆದು ಹಾಕಿದ್ದ ಟಿಪ್ಪು ಸುಲ್ತಾನ್ ಆಡಳಿತ ನಿಜಕ್ಕೂ ಜನಸಾಮಾನ್ಯರ ಅಭಿವೃದ್ಧಿಗೆ ಪೂರಕವಾಗಿತ್ತು. ಇಂತಹ ಭಾರತೀಯ ಅರಸನ ಇತಿಹಾಸವನ್ನು ಅಳಿಸಿ ಹಾಕುವ ಪ್ರಯತ್ನಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗುವ ಮೂಲಕ ರಾಜ್ಯದ ಜಾತ್ಯತೀತ ಮನೋಭಾವದ ಜನರ ಭಾವನೆಗೆ ಧಕ್ಕೆ ತರಲು ಮುಂದಾಗಿದೆ. ಹೀಗಾಗಿ ತಕ್ಷಣ ಇಂತಹ ತಪ್ಪು ನಿರ್ಧಾರದಿಂದ ಹೊರಬರಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸ್ಥಳಕ್ಕಾಗಮಿಸಿದ ಕಂದಾಯ ಇಲಾಖೆ ಶಿರಸ್ತೇದಾರ್ ಪ್ರಕಾಶ್ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಖಾಲಿದ್ ಅಹಮದ್, ಸಿದ್ಧಿಕ್ ಅಹಮದ್  ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ತಾಲೂಕು ಸಂಚಾಲಕ ಜೆ.ಶಿವಮೂರ್ತಿ ಶಂಕರಪುರ, ಮೂಡಹಳ್ಳಿ ಮಹದೇವ್, ಟಿಪ್ಪು ಯುವಕರ ಸಂಘದ ಅಧ್ಯಕ್ಷ ಫರ್ದೀನ್ ಷರೀಫ್, ಮಹಮದ್ ಸಲೀಂ, ಶಿವಮೂರ್ತಿ, ರಾಚಯ್ಯ, ಪ್ರಭುಸ್ವಾಮಿ, ಮಹೇಶ್ ಕುಮಾರ್, ಶಿವಣ್ಣ, ದೇವೆಂದ್ರ, ಶಿವರಾಜು, ಶೇಖರ್, ಗೋಕುಲ್. ಮಹದೇವು, ಪ್ರಕಾಶ್, ಸಂತೋಷ್ ಮತ್ತಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: