ದೇಶಪ್ರಮುಖ ಸುದ್ದಿ

ಕಚೇರಿಯಲ್ಲೇ ಮಹಿಳಾ ತಹಸಿಲ್ದಾರ್ ಸಜೀವ ದಹನ: ರಕ್ಷಿಸಲು ಹೋದ ಇಬ್ಬರಿಗೆ ಗಾಯ

ಹೈದರಾಬಾದ್‌,ನ.5-ಕಚೇರಿಗೆ ನುಗ್ಗಿ ಮಹಿಳಾ ತಹಸಿಲ್ದಾರ್ ಮೇಲೆ ಪೆಟ್ರೋಲ್ ಸುರಿದು ಆಕೆಯನ್ನು ಸಜೀವ ದಹನ ಮಾಡಿರುವ ಘಟನೆ ತೆಲಂಗಾ­ಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ತಹಸಿಲ್ದಾರ್ ವಿಜಯಾ ರೆಡ್ಡಿ (30) ಮೃತಪಟ್ಟವರು. ಹೈದರಾಬಾದ್‌ ಹೊರ ವಲಯದ ಅಬ್ದುಲ್ಲಾಪುರ್‌ಮೆಟ್‌ನಲ್ಲಿ ನಿನ್ನೆ ನಡೆದ ಘಟನೆಯಲ್ಲಿ ವಿಜಯಾ ರೆಡ್ಡಿ ಸ್ಥಳದಲ್ಲೇ ಮೃತಪಟ್ಟರೆ, ಅವರನ್ನು ರಕ್ಷಿಸಲು ಮುಂದಾದ ಇಬ್ಬರು ಸಿಬ್ಬಂದಿಗೆ ಸುಟ್ಟ ಗಾಯಗಳಾಗಿವೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ನಲ್ಲಗೊಂಡಾ ಜಿಲ್ಲೆ ಮೂಲದವರಾದ ವಿಜಯಾ ರೆಡ್ಡಿ, ಇತ್ತೀಚೆಗಷ್ಟೇ ಬಡ್ತಿ ಪಡೆದು, ಅಬ್ದುಲ್ಲಾಪುರ್‌ಮೆಟ್‌ ತಹಸಿಲ್ದಾರ್‌ ಆಗಿ ನೇಮಕಗೊಂಡಿದ್ದರು. ಇಬ್ಬರು ಮಕ್ಕಳ ತಾಯಿಯಾದ ವಿಜಯಾ ಅವರ ಪತಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ ಎಂದು ತಿಳಿದುಬಂದಿದೆ.

ತಹಸಿಲ್ದಾರ್ ಗೆ ಬೆಂಕಿ ಹಚ್ಚಿದ ಆರೋಪಿ ಸುರೇಶ್ ಘಟನೆ ನಂತರ ಪರಾರಿಯಾಗಿದ್ದ. ಆತನನ್ನು ಸಂಜೆ ವೇಳೆಗೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗೂ ಸುಟ್ಟ ಗಾಯಗಳಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ಹಯತ್‌ನಗರದ ಗೌರೆಲ್ಲಿ ಗ್ರಾಮದವನಾ­ಗಿದ್ದು, ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ ತಹಸಿಲ್ದಾರ್‌ ಕಚೇರಿಗೆ ಅಲೆಯು­ತ್ತಿದ್ದ. ವಿವಾದ ಪರಿಹರಿಸಿಕೊಡುವಂತೆ ದುಂಬಾಲು ಬಿದ್ದಿದ್ದ. ಹಲವು ದಿನಗ­ಳಿಂದಲೂ ದಿನವಿಡೀ ಕಚೇರಿ ಸುತ್ತಲೂ ಓಡಾಡುತ್ತಿದ್ದ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ನಿನ್ನೆ ಬೆಳಿಗ್ಗೆಯಿಂದಲೂ ಕಚೇರಿ ಸುತ್ತಲೂ ತಿರು­ಗಾಡುತ್ತಿದ್ದ ಆರೋಪಿ, ಮಧ್ಯಾಹ್ನ ಊಟದ ಸಮಯದಲ್ಲಿ ಕಚೇರಿಯಲ್ಲಿ ಸಿಬ್ಬಂದಿ ಕಡಿಮೆ ಇದ್ದಾಗ ತಹಸಿಲ್ದಾರ್‌ ಚೇಂಬರ್‌ ಪ್ರವೇಶಿಸಿದ್ದಾನೆ. ಮೊದಲಿಗೆ ಅಧಿಕಾರಿಣಿಯ ಜತೆಗೆ ಮಾತನಾಡಬೇ­ಕೆಂದು ಆತ ಅನುಮತಿ ಪಡೆದಿದ್ದ. ಸುಮಾರು ಅರ್ಧಗಂಟೆ ಮಾತನಾಡಿದ ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಚೇಂಬರ್‌ನ ಬಾಗಿಲು ಮುಚ್ಚಿದ ಸುರೇಶ್‌, ತಹಸಿಲ್ದಾರ್‌ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಅಷ್ಟರಲ್ಲಿ ಅಧಿಕಾರಿಣಿಯ ಚೀರಾಟ ಕೇಳಿ, ಡ್ರೈವರ್‌ ಸೇರಿದಂತೆ ಹತ್ತಿರದಲ್ಲೇ ಇದ್ದ ಇಬ್ಬರು ನೌಕರರು ಬಾಗಿಲು ಬಡಿದಿ­ದ್ದಾರೆ. ಈ ವೇಳೆ ಬಾಗಿಲು ತೆರೆದ ಆರೋಪಿ, ಶಾರ್ಟ್‌ ಸಕ್ರ್ಯೂಟ್‌ನಿಂದ ಬೆಂಕಿ ಹೊತ್ತುಕೊಂಡಿದೆ ಎಂದು ಹೇಳಿ, ಜನರ ನಡುವೆ ಕೊಸರಿ­ಕೊಂಡು ತರಾತುರಿಯಲ್ಲಿ ಸುಟ್ಟ ಗಾಯಗ­ಳೊಂದಿಗೆ ಹೊರಗೆ ಓಡಿ ಹೋಗಿದ್ದಾನೆ. ಬೆಂಕಿಗೆ ಕಾರಣವೇನೆಂದು ನಂತರ ಗೊತ್ತಾಗಿದೆ. ಘಟನೆಯಲ್ಲಿ ಆರೋಪಿಯೂ ಗಾಯಗೊಂಡಿರುವು­ದನ್ನು ಖಚಿತಪಡಿಸಿ­ಕೊಂಡ ಪೊಲೀಸರು, ಹತ್ತಿರದ ಆಸ್ಪತ್ರೆಗಳಲ್ಲಿ ಹುಡುಕಾಡಿದಾಗ ಹಯತ್‌ನಗರ ಖಾಸಗಿ ಆಸ್ಪತ್ರೆಯೊಂದರಲ್ಲಿ ಪತ್ತೆಯಾಗಿದ್ದಾನೆ. (ಎಂ.ಎನ್)

Leave a Reply

comments

Related Articles

error: