ಪ್ರಮುಖ ಸುದ್ದಿಮೈಸೂರು

ಮಾರ್ವಾಡಿಗಳಾದ ಬಿಜೆಪಿಗರು : ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್

ಅಮಿತ್ ಶಾ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆಗೆ ಆಗ್ರಹ

ಮೈಸೂರು,ನ.5 : ರಾಜ್ಯದಲ್ಲಿ ಅಸಾಂವಿಧಾನಿಕವಾಗಿ ಈ ಹಿಂದೆ ಇದ್ದ ಮೈತ್ರಿ ಸರ್ಕಾರವನ್ನು ಉರುಳಿಸಿದ್ದರ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವೂ ಇರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆಯೊಂದರಲ್ಲಿ ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅಮಿತ್ ಶಾ ಹಾಗೂ ಸಿಎಂ ಅವರ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ರಾಷ್ಟ್ರಪತಿಗೆ ಮನವಿ ಸಲ್ಲಿರುವುದಾಗಿ ಕೆಪಿಸಿಸಿ ರಾಜ್ಯ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ ತನಿಖೆ ಮೇಲೆ ಈ ಇಬ್ಬರು ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೆ ಈ ಇಬ್ಬರನ್ನೂ ಸಾಂವಿಧಾನಿಕ ಹುದ್ದೆಯಿಂದ ಹೊರಗಿಡಿಸಬೇಕು ಎಂದು ಸಹಾ ಮನವಿ ಪತ್ರದಲ್ಲಿ ಕೋರಿರುವುದಾಗಿ ತಿಳಿಸಿದರು.

ಅಲ್ಲದೆ, ಬಿಎಸ್‌ವೈ ಮಾತಿನ ಸಿಡಿ ಬಿಡುಗಡೆಗೊಳಿಸಿರುವವರು ರಾಜ್ಯಾಧ್ಯಕ್ಷ ನವೀನ್‌ಕುಮಾರ್ ಕಟೀಲ್ ಅವರೇ ಆಗಿದ್ದು, ಇವರಿಗೆ ಇತರರು ನೆರವಾಗಿದ್ದಾರೆ ಎಂದು ತಿಳಿಸಿದರು.

ಜೊತೆಗೆ, ಸತ್ಯ ಒಂದಲ್ಲ ಒಂದು ದಿನ ಹೊರಗೆ ಬರುತ್ತದೆ ಎಂಬುದಕ್ಕೆ ಈ ಸಿಡಿಯೇ ಉದಾಹರಣೆಯಾಗಿದ್ದು, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿ ಸರ್ಕಾರ ಉರುಳಿಸಲು ಯತ್ನಿಸಿ, ಮೂರು ತಿಂಗಳ ಹಿಂದೆ ಪ್ರತಿಯೊಬ್ಬ ಶಾಸಕರಿಗೂ 25 ರಿಂದ 60 ಕೋಟಿ ಎಂಬಂತೆ 17 ಮಂದಿಯನ್ನು ಖರೀದಿಸಿ ಸರ್ಕಾರ ಉರುಳಿಸಿದರು.

ಇದೇ ಸಂದರ್ಭದಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ವೇಳೆ ಬಿ.ಎಸ್.ವೈ ಸಿಡಿ ವಿಷಯದಲ್ಲಿಯೂ ವಿಚಾರಣೆ ನಡೆಸಲು ಸುಪ್ರೀಂಕೋಟ್ ಸಮ್ಮತಿಸಿರುವುದಕ್ಕಾಗಿ ತಾವು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ನಂತರ ಕಾಂಗ್ರೆಸ್ ಮುಖಂಡರಾದ ಮಂಜುಳಾ ಮಾನಸ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿನ ಅರಾಜಕತೆ, ಮಹಿಳೆಯರ ಮೇಲಿನ ದೌರ್ಜನ್ಯ ಮೊದಲಾದ ವಿಷಯಗಳನ್ನು ಮರೆಮಾಚಲು ಬಿಜೆಪಿ ಪಕ್ಷವು ಧರ್ಮ, ಟಿಪ್ಪು, ರಾಮಮಂದಿರ ಮೊದಲಾದ ವಷಯ ಎತ್ತುತ್ತಿದೆ.

ಹಿಂದೂ ಧರ್ಮ ವಿಷಯ ಇರಿಸಿಕೊಂಡು ಇಡೀ ದೇಶವನ್ನು ಒಡೆಯುವ ಯತ್ನ ಮಾಡುತ್ತಿದೆ ಎಂದು ದೂರಿದರು.

ಈಗ ಬಿ.ಎಸ್. ಯಡಿಯೂರಪ್ಪ ಸಿಕ್ಕಿಕೊಂಡಿದ್ದು, ಬಿಜೆಪಿಯವರು ಮಾರ್ವಾಡಿಗಳಾಗಿದ್ದಾರೆ ಎಂಬ ಅರಿವಿರುವ ಮತದಾರರು ವಿಧಾನ ಸಭಾ ಉಪ ಚುನಾವಣೆಯಲ್ಲಿ ಮತದಾರರು ಆ ಪಕ್ಷಕ್ಕೆ ತಕ್ಕ ಉತ್ತರ ನೀಡುತ್ತಾರೆಂದರು.

ಡಾ.ಬಿ.ಜೆ. ವಿಜಯಕುಮಾರ್, ಆರ್. ಮೂರ್ತಿ, ರಾಮಪ್ಪ, ರಾಜೇಶ್ ಹಾಜರಿದ್ದರು.(ವರದಿ : ಕೆ.ಎಂ.ಆರ್)

Leave a Reply

comments

Related Articles

error: