ಮೈಸೂರು

ನೀರು ಮೀಟರ್ ಅಳವಡಿಕೆಗೆ ಜಿಲ್ಲಾಧಿಕಾರಿ ರಣದೀಪ್ ಸೂಚನೆ: ಬಾಕಿ ಬಡ್ಡಿ ಮನ್ನಾ ಮಾಡುವಂತೆ ಮೇಯರ್ ಮನವಿ

ಕುಡಿಯುವ ನೀರು ಅತ್ಯಮೂಲ್ಯವಾಗಿದ್ದು ದುರ್ಬಳಕೆ ಹಾಗೂ ಪೋಲಾಗುವುದನ್ನು ತಡೆಯಲು ನಲ್ಲಿಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಲಾಗಿದ್ದು ತಪ್ಪಿದ್ದಲ್ಲಿ ಸಂಪರ್ಕವನ್ನು ಕಡಿತಗೊಳಿಸಲಾಗುವ ಎಚ್ಚರಿಕೆ ನೀಡಬೇಕೆಂದು ಜಿಲ್ಲಾಧಿಕಾರಿ ರಣದೀಪ್ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ ಜುಸ್ಕೋ ಕಂಪನಿ ಮೈಸೂರಿನಲ್ಲಿ ಮಂಡಿಮೊಹಲ್ಲಾ, ಸಿದ್ಧಾರ್ಥ ನಗರ, ಸೇರಿದಂತೆ ವಿವಿಧ ಬಡಾವಣೆಗಳಲ್ಲಿ 24×7 ಕುಡಿಯುವ ನೀರಿನ ಹೊಸ ಸಂಪರ್ಕ  ಒದಗಿಸುವ ಕಾಮಗಾರಿ ನಡೆಯುತ್ತಿದ್ದು ಇಲ್ಲಿಯವರೆಗೆ ಒಟ್ಟು 8 ಸಾವಿರ ಸಂಪರ್ಕ ಕಲ್ಪಿಸಲಾಗಿದೆ. ನೀರು ಸಂರಕ್ಷಿಸಿದರೆ ಬೇಸಿಗೆಯಲ್ಲಿ ಸಂಭವಿಸುವ ಕುಡಿಯುವ ನೀರಿನ ಬವಣೆಯನ್ನು ನೀಗಿಸಬಹುದು ಎಂದರು.

ಮೇಯರ್ ಬಿ.ಎಲ್. ಭೈರಪ್ಪ
ಮೇಯರ್ ಬಿ.ಎಲ್. ಭೈರಪ್ಪ

ಮೈಸೂರು ನಗರದಲ್ಲಿಯೇ 130 ಕೋಟಿ ರೂಪಾಯಿಗಳ ನೀರಿನ ಬಿಲ್ ಬಾಕಿಯಿದ್ದು ಈ ಮೊತ್ತದಲ್ಲಿ ಶೇ.40ರಷ್ಟು ಶುಲ್ಕ ಪಾವತಿಸದೇ ಇರುವುದಕ್ಕೆ ವಿಧಿಸಿರುವ ಬಡ್ಡಿ ಸೇರಿದೆ. ಬಡ್ಡಿ ಮೊತ್ತವನ್ನು ಮನ್ನಾ ಮಾಡಿದರೆ ನೀರಿನ ಶುಲ್ಕ ಪಾವತಿಸುವುದಾಗಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೇಯರ್ ಬಿ.ಎಲ್. ಬೈರಪ್ಪ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಣದೀಪ್, ಬಡ್ಡಿ ಹಣ ಮನ್ನಾ ಮಾಡುವ ತೀರ್ಮಾನವನ್ನು ಸರ್ಕಾರವು ಕೈಗೊಳ್ಳಬೇಕಾಗಿರುವುದರಿಂದ ಈ ಬಗ್ಗೆ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆಯಿಂದ ಸಲ್ಲಿಸಲು ಸೂಚಿಸಿದರು.

ಕರ್ನಾಟಕ ಪೌರ ಸುಧಾರಣೆ ಯೋಜನೆಯಡಿ ನಂಜನಗೂಡಿನಲ್ಲಿ 24X7 ಕುಡಿಯುವ ನೀರು ಒದಗಿಸಲು 28 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿ ಚಾಲನೆಯಲ್ಲಿದ್ದು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವುದು ಎಂದರು.

ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ ಹಾಗೂ ವಿಕಲಚೇತನರಿಗೆ ಮೀಸಲಾಗಿರುವ  ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ, ಅನುದಾನದ ಸದ್ಬಳಕೆ ಮಾಡಿ ನಿಗದಿತ ಸಮಯದಲ್ಲಿ ಗುರಿ ಸಾಧಿಸಬೇಕು ಕರ್ತವ್ಯ ಲೋಪವಾದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Reply

comments

Related Articles

error: