ಕ್ರೀಡೆಮನರಂಜನೆ

ಸ್ಯಾಂಡಲ್ ವುಡ್ ನಲ್ಲಿ ಪ್ಯಾರಾ ಒಲಿಂಪಿಕ್‌ ವಿಜೇತ ಈಜುಪಟು ವಿಶ್ವಾಸ್ ಬಯೋಪಿಕ್

ಬೆಂಗಳೂರು,ನ.6-ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್ ನಲ್ಲಿ ಅನೇಕರ ಬಯೋಪಿಕ್ ಸಿನಿಮಾಗಳನ್ನು ತೆರೆ ಮೇಲೆ ತಂದಿದೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ಪ್ಯಾರಾ ಒಲಿಂಪಿಕ್ ಗೆದ್ದ ಈಜುಪಟು ಕೆ.ಎಸ್‌.ವಿಶ್ವಾಸ್‌ ಅವರ ಬಯೋಪಿಕ್ ಮೂಡಿಬರುತ್ತಿದೆ.

ಎರಡೂ ಕೈಗಳು ಇಲ್ಲದಿರುವ 30ರ ವಿಶ್ವಾಸ್ ಅವರ ಜೀವನವನ್ನೇ ಬದಲಾಯಿಸಿದ್ದು ಈಜು. ಕೆನಡಾ ಮತ್ತು ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ, ಕಂಚಿನ ಪದಕಗಳನ್ನು ಗೆದ್ದು ಭಾರತದ ಕೀರ್ತಿಯನ್ನು ಬೆಳಗಿದ್ದಾರೆ.

ಇವರ ಜೀವನಾಧಾರಿತ ಸಿನಿಮಾಗೆ ‘ಅರಬ್ಬಿ’ ಎಂದು ಹೆಸರಿಡಲಾಗಿದ್ದು, ಸಿನಿಮಾದಲ್ಲಿ ತಮ್ಮ ಪಾತ್ರವನ್ನು ತಾವೇ ನಿರ್ವಹಿಸುತ್ತಿದ್ದಾರೆ. ಇವರಿಗೆ ಜೋಡಿಯಾಗಿ ‘ಜೋಡಿ ಹಕ್ಕಿ’ ಸೀರಿಯಲ್‌ ಖ್ಯಾತಿಯ ಚೈತ್ರಾ ರಾವ್‌ ಅಭಿನಯಿಸುತ್ತಿದ್ದಾರೆ.

ಆರ್‌. ರಾಜ್‌ಕುಮಾರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾವನ್ನು ಸಿ.ಎಸ್‌. ಚೇತನ್‌ ನಿರ್ಮಾಣ ಮಾಡುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಿನಿಮಾದ ನೋಂದಣಿಯೂ ಆಗಿದೆ.

ಕೋಲಾರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ವಿಶ್ವಾಸ್‌, ಕೃಷಿ ಇಲಾಖೆಯ ಗುಮಾಸ್ತರೊಬ್ಬರ ಪುತ್ರ. 19 ವರ್ಷದ ಹಿಂದೆ ಅಪ್ಪ ಕಟ್ಟಿಸುತ್ತಿದ್ದ ಮನೆಗೆ ಕ್ಯೂರಿಂಗ್‌ ಮಾಡುತ್ತಿದ್ದಾಗ ವಿದ್ಯುತ್‌ ತಂತಿಯ ಮೇಲೆ ಬಿದ್ದು ದುರಂತ ಸಂಭವಿಸಿತು. ಆ ಘಟನೆಯಲ್ಲಿ ವಿಶ್ವಾಸ್‌ ಎರಡೂ ಕೈ ಕಳೆದುಕೊಂಡರೆ, ಅಪ್ಪ ಜೀವವನ್ನೇ ತೆರಬೇಕಾಯಿತು. ಮುಂದೆ ಕೋಲಾರದಲ್ಲಿ ಬದುಕು ಕಷ್ಟವಾದಾಗ, ಅಮ್ಮನೊಂದಿಗೆ ಬೆಂಗಳೂರಿಗೆ ಬಂದರು. ರಾಜಧಾನಿಯಲ್ಲಿ ವಿಶೇಷಚೇತನನಾಗಿಯೇ ಬಿಕಾಂ ಮುಗಿಸಿದ ವಿಶ್ವಾಸ್‌ಗೆ ಕೆಲಸ ಸಿಗಲಿಲ್ಲ. ಆಗ ಧೃತಿಗೆಡದ ವಿಶ್ವಾಸ್ ಈಜು ಕಲಿಯಲು ಮುಂದಾದರು. ಕೈ ಇಲ್ಲದಿದ್ದರೂ ಕಾಲಿನಲ್ಲೇ ಈಜು ಕಲಿತರು. ಮುಂದೆ ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪದಕಗಳನ್ನು ಗೆದ್ದರು.

ಎರಡು ಕೈಗಳಿಲ್ಲದ ವಿಶ್ವಾಸ್‌ ಅದ್ಭುತ ಡಾನ್ಸರ್‌. ಕಿಕ್‌, ಡಿ ಜೂನಿಯರ್ಸ್‌, ಮಜಾ ಟಾಕೀಸ್‌ ಹಾಗೂ ಇತ್ತೀಚಿನ ಥಕದಿಮಿತ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಅವರು ಡಾನ್ಸ್‌ ಕಾರ್ಯಕ್ರಮ ನೀಡಿದ್ದಾರೆ.

ವಿಶ್ವಾಸ್ ಈಜು ತರಬೇತುದಾರ ಶರತ್ ಗಾಯಕ್ವಾಡ್, ವಿಶ್ವಾಸ್‌ ಈ ಸಾಧನೆ ಪದಗಳಿಗೆ ನಿಲುಕದ್ದು, ವರ್ಣನೆಗೆ ಎಟಕದ್ದು ಎನ್ನುತ್ತಾರೆ. (ಎಂ.ಎನ್)

 

Leave a Reply

comments

Related Articles

error: