ಕ್ರೀಡೆಪ್ರಮುಖ ಸುದ್ದಿ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಬಳ್ಳಾರಿ ಟಸ್ಕರ್ಸ್ ನ ಇಬ್ಬರು ಆಟಗಾರರ ಬಂಧನ

ಬೆಂಗಳೂರು,ನ.7-ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ನ ಇಬ್ಬರು ಆಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ.ಗೌತಮ್ ಮತ್ತು ಅಬ್ರಾರ್ ಖಾಜಿ ಬಂಧಿತ ಆಟಗಾರರು. ಪೊಲೀಸರು  ಇಬ್ಬರು ಆಟಗಾರರ ವಿಚಾರಣೆ ನಡೆಸುತ್ತಿದ್ದಾರೆ.

ಇವರಿಬ್ಬರು 2019ರ ಕೆಪಿಎಲ್​​​​​ ಟೂರ್ನಿಯಲ್ಲಿ ಸ್ಪಾಟ್​​​ ಫಿಕ್ಸಿಂಗ್ ನಡೆಸಿದ್ದರು ಎನ್ನಲಾಗಿದೆ. ಹುಬ್ಬಳ್ಳಿ ಟೈಗರ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ನಡುವಿನ ಪಂದ್ಯದಲ್ಲಿ ಈ ಸ್ಪಾಟ್ ಫಿಕ್ಸಿಂಗ್ ನಡೆದಿತ್ತು. ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಗಾಗಿ ಬಕ್ಕಿಗಳ ಬಳಿ 20 ಲಕ್ಷ ರೂಪಾಯಿ ಪಡೆದಿದ್ದರು. ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲೂ ಮ್ಯಾಚ್​​ ಫಿಕ್ಸಿಂಗ್​​ ಮಾಡಿದ್ದರು ಎನ್ನಲಾಗಿದೆ.

ಫೈನಲ್ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ 37 ಎಸೆತ ಎದುರಿಸಿ 29 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಬಳ್ಳಾರಿ ತಂಡ ಎಂಟು ರನ್ ಗಳಿಂದ ಸೋಲನುಭವಿಸಿತ್ತು.

ಬಂಧಿತ ಆಟಗಾರ ಸಿ.ಎಂ.ಗೌತಮ್​ ರಣಜಿ, ಐಪಿಎಲ್​ನ ಆರ್​ಸಿಬಿ, ಮುಂಬೈ ಇಂಡಿಯನ್ಸ್​ ಹಾಗೂ ದೆಹಲಿ ಡೇರ್​ ಡೆವಿಲ್ಸ್​ ತಂಡದ ಪರವಾಗಿ ಆಡಿದ್ದರು. ಸಿ.ಎಂ.ಗೌತಮ್ ಒಂದು ಕಾಲದ ಕರ್ನಾಟಕ ತಂಡದ ಪ್ರಮುಖ ಬ್ಯಾಟ್ಸ್ ಮನ್ ವಿಕೆಟ್ ಕೀಪರ್ ಆಗಿ ತನ್ನ ಕೈಚಳಕವನ್ನು ತೋರುತ್ತಿದ್ದರು. ಕರ್ನಾಟಕ ತಂಡದ ಪರ 94 ಪಂದ್ಯ ಆಡಿರುವ ಗೌತಮ್ 94 ಪಂದ್ಯದಿಂದ 4716 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 10 ಶತಕ ಹಾಗೂ 24 ಅರ್ಧ ಶತಕಗಳು ಕೂಡ ಸೇರಿವೆ. ಸದ್ಯ ಕರ್ನಾಟಕ ರಣಜಿ ತಂಡವನ್ನು ತೊರೆದು ಗೋವಾ ತಂಡದ ಪರ ರಣಜಿಯಲ್ಲಿ ಆಡುತ್ತಿದ್ದಾರೆ.

40 ಟ್ವಿ-20 ಪಂದ್ಯವಾಡಿರುವ ಗೌತಮ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 264 ರನ್ ಗಳಿಸಿ ಅಜಯರಾಗಿ ಉಳಿದಿದ್ದ ಕರ್ನಾಟಕ ತಂಡದ ಪರ ಅತ್ಯಧಿಕ ರನ್ ಗಳಿಸಿದ್ದಾರೆ. 2012 -13 ಸಾಲಿನ ರಣಜಿ ಪಂದ್ಯದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಮಾಡಿದ್ದಾರೆ. ಆ ಸೀಸನ್ ನ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದು, ಭಾರತ ಎ ತಂಡದಲ್ಲೂ ಕಾಣಿಸಿಕೊಂಡಿದ್ದರು.

ಅಬ್ರಾರ್​​​​ ಕಾಜಿ ಕರ್ನಾಟಕದ ಪರವಾಗಿ ರಣಜಿ ಪಂದ್ಯದಲ್ಲಿ ಆಡಿದ್ದರು. ಅವರು ಈಗ ಮಿಜೋರಾಂ ತಂಡದ ಪರವಾಗಿ ಆಡುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: