ಪ್ರಮುಖ ಸುದ್ದಿ

ಜಿ.ಪಂ ತನಿಖಾ ಸಮಿತಿ ಸಭೆ : ಇಇ ಶ್ರೀಕಂಠಯ್ಯ ತಪ್ಪುಗಳು ಸಾಬೀತು : ಕಾಮಗಾರಿ ಗುತ್ತಿಗೆ ಮರು ಹಂಚಿಕೆಗೆ ನಿರ್ಧಾರ

ರಾಜ್ಯ( ಮಡಿಕೇರಿ) ನ.8 :- ಪ್ರಾಕೃತಿಕ ವಿಕೋಪದ ಪರಿಹಾರಕ್ಕಾಗಿ ಬಿಡುಗಡೆಯಾದ 28 ಕೋಟಿ ರೂ.ಗಳನ್ನು ತನ್ನ ಸ್ವ ಇಚ್ಛೆಯಿಂದ ಅಂದಿನ ಕಾರ್ಯಪಾಲಕ ಇಂಜಿನಿಯರ್ ಶ್ರೀಕಂಠಯ್ಯ ಅವರು ಜಿಲ್ಲಾಧಿಕಾರಿಗಳ, ಹಣಕಾಸು ಆರ್ಥಿಕ ಇಲಾಖೆಯ ಹಾಗೂ ಸಂಬಂಧಪಟ್ಟ ಇಲಾಖೆಯ ಒಪ್ಪಿಗೆ ಇಲ್ಲದೆ ಖಾಸಗಿ ಬ್ಯಾಂಕ್ ಆದ ಕೋಟಕ್ ಮಹೀಂದ್ರ ಬ್ಯಾಂಕ್ ಖಾತೆಯಲ್ಲಿರಿಸಿದ ಪ್ರಕರಣವನ್ನು ಅವ್ಯವಹಾರವೆಂದು ಪರಿಗಣಿಸಿ ಇಂದು ತನಿಖಾ ಸಮಿತಿಯ ಸಭೆಯನ್ನು ನಡೆಸಲಾಯಿತು.
ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತನಿಖಾ ಸಮಿತಿ ಸದಸ್ಯರುಗಳಾದ ಕಾರ್ಯಪಾಲಕ ಇಂಜಿನಿಯರ್ ಪ್ರಭು, ಪ್ರಬಾರ ಮುಖ್ಯ ಲೆಕ್ಕಾಧಿಕಾರಿ ಶ್ರೀಧರ ಮೂರ್ತಿ ಅವರುಗಳ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭಾ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಯಿತು.
ಹಣದ ವಹಿವಾಟಿನಲ್ಲಿ ಮತ್ತು ಮಾಹಿತಿ ಹಕ್ಕು ಅಧಿನಿಯಮದಡಿ ಕೆಲವು ಅಂಶಗಳನ್ನು ಪರಿಗಣಿಸಿದಾಗ ಕೆ.ಟಿ.ಸತೀಶ್ ಎಂಬ 3ನೇ ದರ್ಜೆ ಗುತ್ತಿಗೆದಾರನಿಗೆ 1ನೇ ದರ್ಜೆ ಗುತ್ತಿಗೆದಾರನೆಂದು ಕಾಮಗಾರಿ ಆದೇಶ ನೀಡಿರುವುದು ಕಂಡು ಬಂದಿದೆ. ಇದೇ ರೀತಿಯಾಗಿ ಹಲವು ಲೋಪದೋಷಗಳು ಬೆಳಕಿಗೆ ಬಂದಿದ್ದು, ಪ್ರಸಕ್ತ ದಿನಗಳಲ್ಲಿ ಹಿಂದಿನ ದಿನಾಂಕಗಳನ್ನು ನಮೂದಿಸಿ ಕಾಮಗಾರಿ ಆದೇಶವನ್ನು ನೀಡುತ್ತಿರುವುದಾಗಿ ಸದಸ್ಯರುಗಳು ಸಭೆಯಲ್ಲಿ ತಿಳಿಸಿದ್ದನ್ನು ಗಂಭೀರವಾಗಿ ಪರಿಗಣಿಸಲಾಯಿತು.
ಈ ಹಿನ್ನೆಲೆಯಲ್ಲಿ ಹಿಂದಿನ ಪ್ರಬಾರ ಕಾರ್ಯಪಾಲಕ ಇಂಜಿನಿಯರ್ ಶ್ರೀಕಂಠಯ್ಯ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಮತ್ತು ಲೋಪ ದೋಷಗಳಿಂದ ಕೂಡಿರುವ ಕಾಮಗಾರಿಗಳ ಹಂಚಿಕೆಯನ್ನು ರದ್ದು ಪಡಿಸಿ ಅರ್ಹ ಗುತ್ತಿಗೆದಾರರಿಗೆ ಮರು ಹಂಚಿಕೆ ಮಾಡಲು ಸೂಕ್ತ ನಿರ್ದೇಶನ ನೀಡಲು ತನಿಖಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂದಿನ ಕ್ರಮಕ್ಕಾಗಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಣಯ ಕೈಗೊಂಡಿತು. ತನಿಖಾ ಸಮಿತಿ ಸದಸ್ಯರೂ ಹಾಗೂ ಜಿ.ಪಂ ಸದಸ್ಯರಾದ ಬಿ.ಜೆ.ದೀಪಕ್, ಕವಿತಾ ಪ್ರಭಾಕರ್, ಅಪ್ಪಂಡೇರಂಡ ಭವ್ಯ, ಪಿ.ಆರ್.ಪಂಕಜ, ಎಂ.ಬಿ.ಶಿವುಮಾದಪ್ಪ ಹಾಗೂ ಬಾನಂಡ ಎನ್. ಪ್ರತ್ಯು ಸಭೆಯಲ್ಲಿ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: