ಕ್ರೀಡೆ

ಬಾಂಗ್ಲಾ ವಿರುದ್ಧ ಎರಡನೇ ಟಿ20: ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

ರಾಜ್‌ಕೋಟ್‌,ನ.8- ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ ಗಳ ಭರ್ಜರಿ ಜಯ ದಾಖಲಿಸಿದೆ. ಆ ಮೂಲಕ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ರಾಜ್‌ಕೋಟ್‌ನ ಸೌರಾಷ್ಟ್ರ ರಾಜ್ಯ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ ಬಾಂಗ್ಲಾ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.

154 ರನ್ ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ 85 ರನ್‌ ಗಳ ನೆರವಿನಿಂದ 15.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 154 ರನ್‌ಗಳನ್ನು ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಬಾಂಗ್ಲಾ ಎದುರು ಟೀಂ ಇಂಡಿಯಾದ 9ನೇ ಗೆಲುವು.

ರೋಹಿತ್ ಶರ್ಮಾ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ 43 ಎಸೆತಗಳಲ್ಲಿ 85 ರನ್‌ ಗಳಿಸಿದರು.
ರೋಹಿತ್‌ ಶರ್ಮಾ ಭಾರತದ ಪರ ನೂರನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಮತ್ತು ಪುರುಷರ ತಂಡದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆ ಹೊಂದಿದ್ದಾರೆ.

ಎಲ್ಲಾ ಮಾದರಿಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ರೋಹಿತ್‌ ಶರ್ಮಾಗೆ 72 ರನ್‌ಗಳ ಅಗತ್ಯವಿತ್ತು. ಇದೀಗ 85 ರನ್‌ಗಳ ಮೂಲಕ ಸುರೇಶ್‌ ರೈನಾ ಅವರನ್ನು ಹಿಂದಿಕ್ಕಿದ್ದಾರೆ.

ರೋಹಿತ್ ಗೆ ಉತ್ತಮ ಸಾಥ್‌ ನೀಡಿದ ಶಿಖರ್‌ ಧವನ್‌ 27 ಎಸೆತಗಳಲ್ಲಿ 31 ರನ್‌ ಗಳಿಸಿದರು. ರೋಹಿತ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಜೊತೆಯಾಟದಲ್ಲಿ 118 ರನ್ ಕಲೆಹಾಕಿದರು. ಶ್ರೇಯಸ್‌ ಅಯ್ಯರ್‌ 13 ಎಸೆತಗಳಲ್ಲಿ 24 ರನ್‌ ಚಚ್ಚಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಶ್ರೇಯಸ್ ಅಯ್ಯರ್ ಅವರೊಂದಿಗೆ ಕೆ.ಎಲ್.ರಾಹುಲ್ 8 ರನ್ ಗಳಿಸಿ ಅಜೇಯರಾಗುಳಿದರು. ಬಾಂಗ್ಲಾ ಪರ ಅಮಿನುಲ್ ಇಸ್ಲಾಂ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬಾಂಗ್ಲಾ ಪರ ಲಿಟನ್ ದಾಸ್ (30), ಮೊಹಮ್ಮದ್‌ ನೈಮ್ (36), ಸೌಮ್ಯ ಸರ್ಕಾರ್‌ (30), ಮುಷ್ಫಿಕುರ್ ರಹೀಮ್ (4), ಮಹಮುದುಲ್ಲಾ (30), ಆಫಿಫ್ ಹೊಸೇನ್ (6), ಮೊಸಾದೆಕ್ ಹೊಸೇನ್ 7, ಅಮಿನುಲ್ ಇಸ್ಲಾಂ 5 ರನ್ ಗಳಿಸಿ ಅಜೇಯರಾಗುಳಿದರು. ಟೀಂ ಇಂಡಿಯಾ ಪರ ಯಜುವೇಂದ್ರ ಚಾಹಲ್ 2, ದೀಪಕ್‌ ಚಹರ್‌, ಖಲೀಲ್‌ ಅಹ್ಮದ್‌ ಮತ್ತು ವಾಷಿಂಗ್ಟನ್‌ ಸುಂದರ್‌ ತಲಾ ಒಂದು ವಿಕೆಟ್‌ ಪಡೆದರು.

ಸರಣಿಯ 3ನೇ ಹಾಗೂ ನಿರ್ಣಾಯಕ ಪಂದ್ಯ ನಾಗ್ಪುರದ ಜಮ್ತಾ ಕ್ರೀಡಾಂಗಣದಲ್ಲಿ ನ.10ರಂದು ನಡೆಯಲಿದೆ. (ಎಂ.ಎನ್)

Leave a Reply

comments

Related Articles

error: