ಪ್ರಮುಖ ಸುದ್ದಿಮೈಸೂರು

ಚಾಮುಂಡಿಬೆಟ್ಟದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಮೈಸೂರು,ನ.8:- ಇಂದು ರಾಜಕೀಯ ನಾಯಕರ ದಂಡೇ ಚಾಮುಂಡಿಬೆಟ್ಟಕ್ಕೆ ಹರಿದು ಬಂದಿದೆ. ರಾಜಕೀಯ ನಾಯಕರು ಇಂದು ಟೆಂಪಲ್ ರನ್ ನಡೆಸಿದ್ದಾರೆ.

ಅನರ್ಹ ಶಾಸಕರೀರ್ವರು ಭೇಟಿ ನೀಡಿದ ಬಳಿಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ದಂಪತಿ ನಂಜನಗೂಡಿನಿಂದ ಚಾಮುಂಡಿಬೆಟ್ಟಕ್ಕೆ ಬರುವ ವೇಳೆಗೆ ದೇಗುಲದ ಎದುರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ 101 ಈಡುಗಾಯಿ ಒಡೆಯುತ್ತಿದ್ದರು. ತಕ್ಷಣ ಅವರತ್ತ ಧಾವಿಸಿದ ಡಿ.ಕೆ.ಶಿವಕುಮಾರ್ ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ದಂಪತಿ ತಾಯಿ ಚಾಮುಂಡಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಆಶ್ಚರ್ಯವೆಂದರೆ ಈ ವೇಳೆ ಶಾಸಕ ಜಿ.ಟಿ.ದೇವೇಗೌಡರು ಅಲ್ಲೆಲ್ಲೂ ಕಾಣಿಸಿಕೊಳ್ಳಲಿಲ್ಲ. ಇದಕ್ಕೂ ಮೊದಲು ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಜೊತೆಗಿದ್ದ ಶಾಸಕ ಜಿ.ಟಿ.ದೇವೇಗೌಡರು ಮಾಜಿ ಪ್ರಧಾನಿ ಬರುವ ವೇಳೆಗೆ ಅಲ್ಲೆಲ್ಲೂ ಕಂಡು ಬರಲಿಲ್ಲ.

ಚಾಮುಂಡೇಶ್ವರಿ ದರ್ಶನ ಪಡೆದು ಆದಿ ಚುಂಚನಗಿರಿ ಶಾಖಾ ಮಠಕ್ಕೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ಸಾ.ರಾ.ಮಹೇಶ್ ಎದುರಾಗಿದ್ದು, ಇಬ್ಬರೂ ಉಭಯ ಕುಶಲೋಪರಿ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: