ಕ್ರೀಡೆ

ಐಪಿಎಲ್ ನಲ್ಲೂ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಲಿ: ಬಿಸಿಸಿಐಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಮನವಿ

ನವದೆಹಲಿ,ನ.8- ಇಂಡಿಯನ್ ಪ್ರೀಮಿಯರ್ ಲೀಗ್‍ (ಐಪಿಎಲ್) ನ ಪಂದ್ಯ ಆರಂಭವಾಗುವ ಮುನ್ನ ರಾಷ್ಟ್ರಗೀತೆ ಹಾಡಬೇಕು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಬಿಸಿಸಿಐಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​​ ಪಂದ್ಯಗಳು ಆರಂಭಗೊಳ್ಳುವುದಕ್ಕೂ ಮುನ್ನ ಸ್ಟೇಡಿಯಂನಲ್ಲಿ ರಾಷ್ಟ್ರಗೀತೆ ಹಾಕುವ ಸಂಪ್ರದಾಯವಿದೆ. ಪಂದ್ಯ ಆರಂಭವಾಗುವ ಮುನ್ನ ಪ್ರತಿಯೊಂದು ತಂಡಗಳು ತಮ್ಮ ತಮ್ಮ ದೇಶದ ರಾಷ್ಟ್ರಗೀತೆಗಳನ್ನು ಹಾಡುವುದು ವಾಡಿಕೆ. ಇದು ಐಪಿಎಲ್ ನಲ್ಲಿ ಇಲ್ಲ. ಐಪಿಎಲ್‌ ವೇಳೆಯೂ ರಾಷ್ಟ್ರಗೀತೆ ಹಾಕಿ ಎನ್ನುವುದು ನನ್ನ ಸಲಹೆ ಎಂದಿದ್ದಾರೆ.

ಈ ಬಗ್ಗೆ ವಾಡಿಯಾ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರ ಬರೆದಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲಿ ಯಾವುದೇ ಉದ್ಘಾಟನಾ ಕಾರ್ಯಕ್ರಮ ಇಲ್ಲದ ಕಾರಣ, ಅದರ ಬದಲಿಗೆ ಈ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯ ಮಾಡಿದ್ದಾರೆ. ಇದೇ ವೇಳೆ ಪ್ರತಿ ವರ್ಷ ಐಪಿಎಲ್‍ನ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮವನ್ನು ಬಿಸಿಸಿಐ ರದ್ದು ಮಾಡಿದ ಕ್ರಮವನ್ನು ವಾಡಿಯಾ ಶ್ಲಾಘಿಸಿದ್ದಾರೆ.

ಅಮೆರಿಕದ ನ್ಯಾಷನಲ್‌ ಬಾಸ್ಕೆಟ್‌ ಬಾಲ್ ಅಸೋಸಿಯೇಷನ್(ಎನ್‌ಬಿಎ)ನ ಪ್ರತಿಯೊಂದು ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲಾಗುತ್ತದೆ. ಅದೇ ರೀತಿ ನಮ್ಮ ದೇಶದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಎಲ್ಲ ಲೀಗ್‌ಗಳಲ್ಲೂ ರಾಷ್ಟ್ರಗೀತೆ ಅಳವಡಿಸಿದ್ದೇ ಆದಲ್ಲಿ ನಮ್ಮ ದೇಶದ ರಾಷ್ಟ್ರಗೀತೆ ಬಗ್ಗೆ ನಮಗೆ ಇನ್ನಷ್ಟು ಹೆಮ್ಮೆ ಉಂಟಾಗಲಿದೆ.

ಈ ವಾರದ ಆರಂಭದಲ್ಲಿ ಐಪಿಎಲ್ ಆಡಳಿತ ಮಂಡಳಿ ಹಾಗೂ ಹಲವು ಫ್ರಾಂಚೈಸಿಗಳು ವಿದೇಶಿ ಫ್ರಾಂಚೈಸಿ ತಂಡಗಳೊಂದಿಗೆ ಸೌಹಾರ್ಧ ಪಂದ್ಯಗಳಾಡುವ ಬಗ್ಗೆ ಚರ್ಚೆ ನಡೆಸಿದ್ದವು. ಆದರೆ, ಈ ಬಗ್ಗೆ ಐಸಿಸಿಯ ಮುಂದಿನ ಪ್ರವಾಸಗಳ ವೇಳಾಪಟ್ಟಿ ಬಗ್ಗೆ ಹೆಚ್ಚಿನದಾಗಿ ತಿಳಿದುಕೊಳ್ಳುವ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಾಡಿಯಾ, ಒಂದು ವೇಳೆ ಫ್ರಾಂಚೈಸಿ ತಂಡಗಳನ್ನು ವಿದೇಶದಲ್ಲಿ ಸೌಹಾರ್ದ ಪಂದ್ಯಗಳಾಡಿಸುವುದರಿಂದ ಐಪಿಎಲ್ ಟಿ20 ಟೂರ್ನಿಯನ್ನು ಮತ್ತಷ್ಟು ಹಿಗ್ಗಿಸಿದಂತಾಗುತ್ತದೆ. ಇದರಿಂದ ಬಿಸಿಸಿಐ ಸೇರಿದಂತೆ ಫ್ರಾಂಚೈಸಿಗಳಿಗೂ ಲಾಭವಾಗಲಿದೆ. ಪ್ರಚಂಚದ ಅಗ್ರ ಫುಟ್ಬಾಲ್ ಲೀಗ್ ತಂಡಗಳೂ ಇದೇ ರೀತಿ ಸಾಗರೋತ್ತರ ಸೌಹಾರ್ಧಯುತ ಪಂದ್ಯಗಳಾಡುತ್ತಿವೆ. ಇದನ್ನೂ ಬಿಸಿಸಿಐ ಗಂಭೀರವಾಗಿ ಗಮನಿಸಬೇಕು. ಇದರಿಂದ ಐಪಿಎಲ್ ಮಹತ್ವ ಹೆಚ್ಚು ಜನತೆಗೆ ತಿಳಿಯಲಿದೆ ಎಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: