ಕರ್ನಾಟಕ

ಚಿತ್ರಮಂದಿರದಲ್ಲಿ ಯುವಕರಿಂದ ರಾಷ್ಟ್ರಗೀತೆಗೆ ಅಗೌರವ: ಎಫ್‌ಐಆರ್‌ ದಾಖಲು

ಬೆಂಗಳೂರು,ನ.8- ನಗರದ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಲ್ಲದ ವಿದ್ಯಾರ್ಥಿಗಳ ಮೇಲೆ ನಿಂದಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಚಿಹ್ನೆಗಳಿಗೆ ಅಗೌರವ ತಡೆ ಕಾಯಿದೆ ಕಲಂ 3ರ ಅಡಿ ಸುಬ್ರಮಣ್ಯನಗರ ಠಾಣೆ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.

ಅ.23ರಂದು ಒರಾಯನ್‌ ಮಾಲ್‌ನ ಪಿವಿಆರ್‌ ಚಿತ್ರಮಂದಿರದಲ್ಲಿ ‘ಅಸುರನ್‌’ ಸಿನಿಮಾ ಪ್ರದರ್ಶನ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಹಾಕಲಾಗಿತ್ತು. ಈ ವೇಳೆ ಯುವಕ-ಯುವತಿಯರನ್ನೊಳಗೊಂಡ ನಾಲ್ವರ ತಂಡ ಎದ್ದು ನಿಂತಿರಲಿಲ್ಲ. ಅದೇ ಚಿತ್ರಮಂದಿರದಲ್ಲಿದ್ದ ಕನ್ನಡ ನಟ ಅರುಣ್‌ ಗೌಡ, ಬಿ.ವಿ.ಐಶ್ವರ್ಯ ಮತ್ತಿತರರು ಯುವಕರನ್ನು ತರಾಟೆಗೆ ತೆಗೆದುಕೊಂಡು ನಿಂದಿಸಿದ್ದರು.

ಚಿತ್ರ ವೀಕ್ಷಣೆಗೆ ಬಂದಿದ್ದವರು ವಿದ್ಯಾರ್ಥಿಗಳನ್ನು ನಿಂದಿಸಿ ಅವಮಾನಿಸಿ ಕೊನೆಗೆ ಅವರು ಸಿನಿಮಾ ವೀಕ್ಷಿಸದೆ ಥಿಯೇಟರ್ ನಿಂದ ನಿರ್ಗಮಿಸಬೇಕಾದ ಪರಿಸ್ಥಿತಿ ಬಂದಿತ್ತು. ಕೆಲವರು ವಿದ್ಯಾರ್ಥಿಗಳನ್ನು ಭಯೋತ್ಪಾದಕರು, ದೇಶ ವಿರೋಧಿಗಳೆಂದು ನಿಂದಿಸಿದ್ದರು. ಈ ಸಂಬಂಧ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ. ಪಿವಿಆರ್‌ನಲ್ಲಿರುವ ಸಿಸಿ ಕ್ಯಾಮೆರಾ ವಿಡಿಯೋ ಸೇರಿದಂತೆ ಲಭ್ಯವಿರುವ ದಾಖಲೆ ನೀಡುವಂತೆ ಕೇಳಲಾಗಿದೆ. ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಘಟನೆ ಕುರಿತು ಆರಂಭದಲ್ಲಿ ಎನ್‌ಸಿಆರ್‌ ದಾಖಲಿಸಿಕೊಳ್ಳಲಾಗಿತ್ತು. ನಂತರ ನ್ಯಾಯಾಲಯದಿಂದ ಅನುಮತಿ ಪಡೆದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು. (ಎಂ.ಎನ್)

Leave a Reply

comments

Related Articles

error: