ಕ್ರೀಡೆ

ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ರವಿಚಂದ್ರನ್ ಅಶ್ವಿನ್

ನವದೆಹಲಿ,.8-ಕಿಂಗ್ಸ್ ಇವೆಲೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಸುದ್ದಿಯಾಗಿತ್ತು. ಆದರೆ ಅಧಿಕೃತಗೊಂಡಿರಲಿಲ್ಲ. ಇದೀಗ ಅಶ್ವಿನ್ ಡೆಲ್ಲಿ ತಂಡ ಸೇರಿಕೊಂಡಿರುವುದು ಅಧಿಕೃತವಾಗಿದೆ.

ಈ ಬಗ್ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಸ್ಪಷ್ಟನೆ ನೀಡಿದ್ದಾರೆ. ವ್ಯವಹಾರದ ಭಾಗವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಡಗೈ ಸ್ಪಿನ್ನರ್ ಜೆ.ಸುಚಿತ್ ಹಾಗೂ ಹೆಚ್ಚುವರಿ 1.5 ಕೋಟಿ ರೂ.ಗಳನ್ನು ಪಂಜಾಬ್ ತಂಡಕ್ಕೆ ಪಾವತಿಸಲಿದೆ.

ಇನ್ನೊಂದೆಡೆ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2018ರ ಹರಾಜು ಮೌಲ್ಯ 7.6 ಕೋಟಿ ರೂ.ಗಳನ್ನು ಗಿಟ್ಟಿಸಿಕೊಳ್ಳಲಿದ್ದಾರೆ. ಈ ಒಪ್ಪಂದದಿಂದ ಎಲ್ಲರೂ ಸಂತೋಷವಾಗಿದ್ದಾರೆ. ನಾವು ಸಂತೋಷವಾಗಿದ್ದು, ಅಶ್ವಿನ್ ಮತ್ತು ಡೆಲ್ಲಿ ತಂಡವೂ ಸಂತೋಷವಾಗಿದೆ. ನಾವು ಮೂರು ತಂಡಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಆದರೆ ಅಂತಿಮವಾಗಿ ಈ ತೀರ್ಮಾನಕ್ಕೆ ಬಂದಿದ್ದೇವೆ. ನಾವೀಗ ಅಶ್ವಿನ್‌ಗೆ ಶುಭ ಹಾರೈಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಕೆಲವು ಸಮಯಗಳಿಂದ ಅಶ್ವಿನ್ ವಿನಿಮಯ ಮಾಡಿಕೊಳ್ಳುವ ಸಂಬಂಧ ಅನೇಕ ಊಪಾಪೋಹಗಳು ಎದ್ದಿದ್ದವು. ಕೊನೆಗೂ ಅನ್ಯೋನ್ಯ ಸೌಹಾರ್ದಯುತವಾಗಿ ಬಿಟ್ಟು ಹೋಗಲು ನಿರ್ಧರಿಸಲಾಗಿದೆ. ಅಶ್ವಿನ್‌ ಗುಡ್ ಬೈ ಹೇಳಿರುವ ಹಿನ್ನಲೆಯಲ್ಲಿ ಕರ್ನಾಟಕದ ಕೆ.ಎಲ್.ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗುವುದು ಖಚಿತವೆನಿಸಿದೆ. ಕಳೆದೆರಡು ಸಾಲಿನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿರುವ ರಾಹುಲ್, ರನ್ ಹೊಳೆಯನ್ನೇ ಹರಿಸಿದ್ದಾರೆ. 2018 ಹಾಗೂ 2019ನೇ ಸಾಲಿನಲ್ಲಿ ಅನುಕ್ರಮವಾಗಿ 659 ಗಾದೂ 593 ರನ್ ಪೇರಿಸಿದ್ದಾರೆ.

2009ನೇ ಸಾಲಿನಲ್ಲಿ ಐಪಿಎಲ್‌ಗೆ ಕಾಲಿರಿಸಿದ ಅಶ್ವಿನ್ ಇದುವರೆಗೆ ಆಡಿರುವ 139 ಪಂದ್ಯಗಳಲ್ಲಿ 125 ವಿಕೆಟುಗಳನ್ನು ಕಬಳಿಸಿದ್ದಾರೆ. ಅಲ್ಲದೆ 2010 ಹಾಗೂ 2011ನೇ ಸಾಲಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

2018ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಅಶ್ವಿನ್ ನೇಮಕಗೊಂಡಿದ್ದರು. ಅಶ್ವಿನ್ ಮುಂದಾಳತ್ವದಲ್ಲಿ ಎರಡೂ ಆವೃತ್ತಿಗಳಲ್ಲಿ ಪಂಜಾಬ್ ತಂಡವು ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ದ್ವಿತಿಯಾರ್ಧದಲ್ಲಿ ವೈಫಲ್ಯ ಅನುಭವಿಸಿತ್ತು. ಇದರಿಂದಾಗಿ 2018 ಹಾಗೂ 2019ನೇ ಸಾಲಿನಲ್ಲಿ ಅನುಕ್ರಮವಾಗಿ ಏಳು ಹಾಗೂ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದವು.

ಐಪಿಎಲ್ 2020 ರ ಹರಾಜು ಪ್ರಕ್ರಿಯೆಯು ಕೋಲ್ಕೊತ್ತಾದಲ್ಲಿ ಡಿಸೆಂಬರ್ 19ರಂದು ನಡೆಯಲಿದೆ. ಇದಕ್ಕೂ ಮುಂಚಿತವಾಗಿ ಆಟಗಾರರನ್ನು ಪರಸ್ಪರ ವ್ಯವಹಾರ ಮಾಡಿಕೊಳ್ಳಲು ನ.14 ಕೊನೆಯ ದಿನವಾಗಿದೆ. (ಎಂ.ಎನ್)

Leave a Reply

comments

Related Articles

error: