ಪ್ರಮುಖ ಸುದ್ದಿಮೈಸೂರು

‘ಸಂವಿಧಾನ ದಿನಾಚರಣೆ’ ಸುತ್ತೋಲೆ ವಾಪಾಸ್ಸು ಪಡೆಯಲು ಮಾಜಿ ಮೇಯರ್ ಆಗ್ರಹ

ಮೈಸೂರು, ನ.8 : ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂದು ಸಂವಿಧಾನ ದಿನ ಆಚರಣೆ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕೆಂದು ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದರು.

ದಲಿತರು,ಪ್ರಗತಿಪರ ಸಂಘಟನೆಗಳು ಸೇರಿದಂತೆ ಹಲವರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ದೇಶಾದ್ಯಂತ ನ.26ರಂದು ಸಂವಿಧಾನ ದಿನಾಚರಣೆ ಆಚರಿಸಲು ನಿರ್ಧರಿಸಿರುವುದು ಸ್ವಾಗರ್ತಾಹ, ಆದರೆ ಈ ಸಂಬಂಧ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಬಿ.ಆರ್.ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎನ್ನುವ ಅಂಶವನ್ನು ಉಲ್ಲೇಖಿಸಿರುವುದು ದುರಾದೃಷ್ಟಕರ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಸಂವಿಧಾನಕ್ಕೆ ಅಂತಿಮ ರೂಪಕೊಡುವ ಸಮಿತಿಯಲ್ಲಿ ಏಳು ಜನರಿದ್ದರು, ಅದರಲ್ಲಿ ಇಬ್ಬರು ನಿಧನರಾದರೆ, ಮತ್ತಿಬ್ಬರು ವಿದೇಶಕ್ಕೆ ತೆರಳಿದ್ದರು. ಮತ್ತಿಬ್ಬರು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರಿಂದ ಅಂಬೇಡ್ಕರ್ ಒಬ್ಬರೇ ಅದನ್ನು ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದರು. ಈ ಅಂಶ ಸಂಸತ್ತಿನಲ್ಲಿ ನಡೆದ ಸಂವಿಧಾನ ಒಪ್ಪಿಗೆ ಚರ್ಚೆಯಲ್ಲಿಯೂ ಉಲ್ಲೇಖಿಸಲಾಗಿದೆ ಎಂದರು.

ಈ ಅಂಶವನ್ನು ಮರೆಮಾಚಿ ಮಕ್ಕಳಿಗೆ ತಪ್ಪು ಸಂದೇಶ ನೀಡುವ ಸುತ್ತೋಲೆ ವಾಪಸು ಪಡೆಯದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗತ್ತದೆ, ಸಂವಿಧಾನ ಜಾರಿಯಾಗಿ 70 ವರ್ಷಗಳೇ ಕಳೆಯುತ್ತಿವೆ. ಈ ವೇಳೆ ಕೆಲ ಕಲುಷಿತ ಮನಸ್ಸುಗಳು ಅದರಲ್ಲಿನ ಅಂಬೇಡ್ಕರ್ ಪಾತ್ರ ಕುರಿತಂತೆ ಏನೇನನ್ನೋ ಹೇಳುತ್ತಿದ್ದು, ಅದಕ್ಕೆಲ್ಲ ತಕ್ಕ ಉತ್ತರ ನೀಡಲಾಗಿದೆ.

ಆದರೂ ಈಗ ಸಂವಿಧಾನ ದಿನ ಆಚರಣಾ ಜಾಗೃತಿ ಅಭಿಯಾನ ವೇಳೆ ಡಾ.ಬಿ.ಆರ್. ಅಂಬೇಡ್ಕರ್ ಪಾತ್ರ ಮರೆಮಾಚುವ ಯತ್ನ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಮನುವಾದಿಗಳದ್ದು ಅಸಮಾನತೆಯ ಸಂವಿಧಾನವಾಗಿದ್ದರೆ, ಅಂಬೇಡ್ಕರ್ ರಚಿಸಿದು ಸಮಾನತೆಯ ಸಂವಿಧಾನವಾಗಿದೆ. ಆದರೂ ಸುತ್ತೋಲೆ ಹೆಸರಿನಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಯತ್ನ ನಡೆದಿದೆ ಎಂದು ಆರೋಪಿಸಿದರು.

ಜೊತೆಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಮನಸ್ಸು ತಿರುಚುವ ಆ ಸುತ್ತೋಲೆ ವಾಪಸು ಪಡೆದು, ಎಲ್ಲರೊಡನೆ ಚರ್ಚೆ ಮಾಡಿ ಸೂಕ್ತ ರೀತಿಯ ಮಾಹಿತಿ ಮಕ್ಕಳಿಗೆ ನೀಡಬೇಕೆಂದು ಆಗ್ರಹಿಸಿದರು.

ಕೃಷ್ಣಮೂರ್ತಿ ಚಮರಂ, ಹಿನಕಲ್ ಸೋಮು, ಸೋಮಯ್ಯ ಮಲೆಯೂರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: