ದೇಶ

ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್ ಪಿಜಿ ಭದ್ರತೆ ವಾಪಸ್ ಪಡೆದ ಸರ್ಕಾರ

ನವದೆಹಲಿ,ನ.8-ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕುಟುಂಬಕ್ಕೆ ನೀಡಲಾಗಿದ್ದ ವಿಶೇಷ ಭದ್ರತಾ ವ್ಯವಸ್ಥೆಯನ್ನು (ಎಸ್ ಪಿಜಿ) ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿದೆ.

ಸೋನಿಯಾ ಗಾಂಧಿ, ಪುತ್ರ ಹಾಗೂ ಸಂಸದ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿಗೆ ನೀಡಲಾಗಿದ್ದ ಎಸ್ ಪಿಜಿ ವ್ಯವಸ್ಥೆಯನ್ನು ವಾಪಸ್ ಪಡೆಯಲಾಗಿದೆ. ಅಲ್ಲದೆ, ಗಾಂಧಿ ಕುಟುಂಬಕ್ಕೆ ಅಖಿಲ ಭಾರತ ಆಧಾರದ ಮೇಲೆ ಸಿಆರ್ ಪಿಎಫ್ ನಿಂದ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಗುಂಡು ಹಾರಿಸಿ ಹತ್ಯೆಗೈದಿದ್ದರು. ಆ ಬಳಿಕ 1985ರಲ್ಲಿ ಹಾಲಿ ಪ್ರಧಾನಿಗೆ ಮತ್ತು ಮಾಜಿ ಪ್ರಧಾನ ಮಂತ್ರಿಗಳಿಗೆ ಮತ್ತು ಅವರ ನಿಕಟ ಕುಟುಂಬಕ್ಕೆ ಎಸ್ ಪಿಜಿ ಭದ್ರತೆ ಕೊಡುವ ವ್ಯವಸ್ಥೆ ಜಾರಿಯಾಗಿತ್ತು.

ನಂತರ ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಎಲ್ ಟಿಟಿಇ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಹತ್ಯೆಗೈದ ನಂತರ ಎಸ್ ಪಿಜಿ ಭದ್ರತೆಯಲ್ಲಿ ಮತ್ತಷ್ಟು ಬದಲಾವಣೆ ಮಾಡಲಾಗಿತ್ತು.

ಇತ್ತೀಚಿಗೆ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್ ಪಿಜಿ ಭದ್ರತೆಯನ್ನು ಸಹ ಕೇಂದ್ರ ಸರ್ಕಾರ ವಾಪಾಸ್ ಪಡೆದುಕೊಂಡಿತ್ತು. (ಎಂ.ಎನ್)

Leave a Reply

comments

Related Articles

error: