ದೇಶಪ್ರಮುಖ ಸುದ್ದಿ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ದೇವೇಂದ್ರ ಫಡ್ನವೀಸ್

ಮುಂಬೈ,ನ.8- ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇಂದು ರಾಜಭವನಕ್ಕೆ ತೆರಳಿದ ದೇವೇಂದ್ರ ಫಡ್ನವೀಸ್ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಫಡ್ನವೀಸ್ ಅವರ ಜತೆಯಲ್ಲಿ ಸಚಿವ ಸಂಪುಟ ಕೂಡ ರಾಜೀನಾಮೆ ಸಲ್ಲಿಸಿದೆ.

ಫಡ್ನವೀಸ್ ರಾಜೀನಾಮೆ ಸಲ್ಲಿಸಿದ್ದರೂ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಅಥವಾ ಬೇರೆ ಪರ್ಯಾಯ ಮಾರ್ಗ ಕಂಡುಕೊಳ್ಳುವವರೆಗೂ ದೇವೇಂದ್ರ ಫಡ್ನವೀಸ್ ಹಂಗಾಮಿ ಮುಖ್ಯಮಂತ್ರಿಯಾಗಿ ಇರಲಿದ್ದಾರೆ.

ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಫಡ್ನವೀಸ್, ನಾನು ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜೀನಾಮೆ ಅಂಗೀಕಾರವಾಗಿದೆ. ಕಳೆದ ಐದು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಲು ಅವಕಾಶ ನೀಡಿದ ಮಹಾರಾಷ್ಟ್ರ ಜನತೆಗೆ ನನ್ನ ಅಭಿನಂದನೆಗಳು.

2.5 ವರ್ಷಗಳ ಅಧಿಕಾರ ಹಂಚಿಕೆ ವಿಷಯ ನನ್ನ ಮುಂದೆ ಬಂದಿಲ್ಲ. ಉದ್ಧವ್ ಜಿ ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ. ನಾವು ಅವರೊಂದಿಗಿನ ಮಾತುಕತೆ ನಿಲ್ಲಿಸಿಲ್ಲ. ಅವರೇ ನಮ್ಮ ಜೊತೆ ಮಾತನಾಡುತ್ತಿಲ್ಲ. ಅವರು ಬೇಸರಗೊಂಡಿರುವ ಸಾಧ್ಯತೆ ಇದೆ. ಅವರ ಜೊತೆ ಚರ್ಚಿಸಲು ಕೆಲ ಸಮಯಾವಕಾಶ ಬೇಕು. ಆದರೆ, ದುರಾದೃಷ್ಟಕರ ಸಂಗತಿ ಎಂದರೆ ದಿನಕ್ಕೆ ಒಂದು ಅಥವಾ ಎರಡು ಸಲ ಶಿವಸೇನೆ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಸೇನೆ ಸುತ್ತಮುತ್ತ ಇರುವ ಜನರಿಂದ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ವಿರೋಧ ಪಕ್ಷಗಳು ನಮ್ಮನ್ನು ಟೀಕಿಸಲಿ. ಆದರೆ, ಶಿವಸೇನೆ ನಮ್ಮ ಆಡಳಿತದ ಒಂದು ಭಾಗವಾಗಿದ್ದು, ಟೀಕಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಮೂರು ವಾರ ಕಳೆದರೂ ಸರ್ಕಾರ ರಚನೆಯ ತಿಕ್ಕಾಟ ಪರಿಹಾರ ಕಂಡಿಲ್ಲ. ಸರ್ಕಾರ ರಚನೆಯಾಗುವವರೆಗೂ ಫಡ್ನವೀಸ್ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಭಾವಿಸಲಾಗಿತ್ತು. ಈಗ ಫಡ್ನವೀಸ್ ರಾಜೀನಾಮೆ ನೀಡಿರುವುದರಿಂದ ಮಹಾರಾಷ್ಟ್ರದಲ್ಲಿ ಅಧಿಕೃತವಾಗಿ ಆಡಳಿತ ಸ್ಥಗಿತಗೊಂಡಂತಾಗಿದೆ.

ವಿಧಾನಸಭೆ ಚುನಾವಣೆ ನಡೆದು ಅ.24ರಂದು ಫಲಿತಾಂಶ ಬಂದಿದ್ದರೂ ಸರ್ಕಾರ ರಚನೆಯಾಗಿರಲಿಲ್ಲ. ಬಿಜೆಪಿ ಮತ್ತು ಶಿವಸೇನೆಗಳ ನಡುವೆ ಮುಖ್ಯಮಂತ್ರಿಗಾದಿ ವಿಚಾರವಾಗಿ ಏರ್ಪಟ್ಟ ಬಿಕ್ಕಟ್ಟಿನ ಪರಿಣಾಮ ಈಗ ಫಡ್ನವೀಸ್ ರಾಜೀನಾಮೆ ಸಲ್ಲಿಸಬೇಕಾಯಿತು.

ಪ್ರಸ್ತುತ ಇದ್ದ ವಿಧಾನಸಭೆಯ ಆಡಳಿತಾವಧಿಯು ಶುಕ್ರವಾರ ಮಧ್ಯರಾತ್ರಿಗೆ ಅಂತ್ಯವಾಗುತ್ತದೆ. ಅದಕ್ಕೂ ಮೊದಲು ಸರ್ಕಾರ ರಚನೆಗೆ ಯಾವುದೇ ಪಕ್ಷ ರಾಜ್ಯಪಾಲರ ಮುಂದೆ ಬಂದು ಹಕ್ಕು ಮಂಡಿಸದೆ ಇದ್ದರೆ ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಿಕೆಯಾಗಲಿದೆ. (ಎಂ.ಎನ್)

Leave a Reply

comments

Related Articles

error: