ಮೈಸೂರು

ನಾಳೆ ಈದ್ ಮಿಲಾದ್-ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿ

ಮೈಸೂರು,ನ.9:- ಮೈಸೂರು ನಗರದಲ್ಲಿ   10/11/2019 ರಂದು ಈದ್‍ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಇದೇ ದಿನ ಟಿಪ್ಪು ಜಯಂತಿಯನ್ನು ಸಹ ಆಚರಣೆ ಮಾಡಲಾಗುತ್ತಿದೆ. ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಈ ಹಿಂದಿನಿಂದಲೂ ಹಲವಾರು ಸಂಘಟನೆಗಳು ಪರ ಹಾಗೂ ವಿರೋಧ ವ್ಯಕ್ತಪಡಿಸಿ ಮೆರವಣಿಗೆ, ಪ್ರತಿಭಟನೆ ನಡೆಸಿರುತ್ತಾರೆ. ಅದಕ್ಕಾಗಿ 10/11/2019 ರಂದು ಮೈಸೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು, ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ (144 ಸೆಕ್ಷನ್) ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಅಯುಕ್ತ ಕೆ.ಟಿ.ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ.

ಈದ್‍ಮಿಲಾದ್ ಹಬ್ಬದ ಆಚರಣೆಯನ್ನು ಹೊರತುಪಡಿಸಿ ಯಾವುದೇ ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಬಹಿರಂಗ ಸಭೆಗಳನ್ನು ನಡೆಸದಂತೆ ಮತ್ತು ಅವರುಗಳು ಬರುವಂತಹ ವಾಹನಗಳ ಮೇಲೆ ಬ್ಯಾನರ್, ಬಂಟಿಂಗ್ಸ್, ಬಾವುಟಗಳನ್ನು, ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಪ್ರಚೋದಾನತ್ಮಕ ಘೋಷಣೆಗಳನ್ನು ಕೂಗದಂತೆ, ಪಟಾಕಿ ಸಿಡಿಸದಂತೆ, ಟ್ಯಾಬ್ಲೋ, ಪ್ರಚೋದನಾತ್ಮಕ ಚಿತ್ರವಿರುವ ಯಾವುದೇ ಫಲಕಗಳನ್ನು ಹಾಕಿಕೊಂಡು ಬರದಂತೆ, ಬೈಕಿನಲ್ಲಿ ಬರುವವರು ಮೂರು ನಾಲ್ಕು ಜನರನ್ನು ಕೂರಿಸಿಕೊಂಡು ಅತಿವೇಗವಾಗಿ, ವೀಲಿಂಗ್‍ನಲ್ಲಿ ಬರದಂತೆ ಮತ್ತು ಗುಂಪು ಗುಂಪಾಗಿ ಪ್ರತಿಭಟನೆ ಮಾಡುವುದನ್ನು ನಿಷೇಧಿಸಲಾಗಿದೆ.    ಆದ್ದರಿಂದ ಕಲಂ 35 ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ  ಇಂದು ಅಂದರೆ  09/11/2019 ರ ಮಧ್ಯರಾತ್ರಿ 12  ಗಂಟೆಯಿಂದ   10/11/2019 ರ ಮಧ್ಯರಾತ್ರಿ 12 ಗಂಟೆವರೆಗೆ ಕಾರ್ತಿಕ ಮಾಸದ ಕಾರ್ಯಕ್ರಮಗಳು, ದೇವಸ್ಥಾನದ ಕಾರ್ಯಕ್ರಮಗಳನ್ನು ಹೊರತುಪಡಿಸಿ ಮೇಲ್ಕಂಡ ವಿಚಾರಗಳ ಬಗ್ಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದಿದ್ದಾರೆ.

ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಭೆ-ಸಮಾರಂಭ, ಮೆರವಣಿಗೆಯನ್ನು ನಡೆಸಲು ಪ್ರಯತ್ನಿಸಿದಲ್ಲಿ, ಅಲ್ಲಿ ಸೇರಿರುವ ಜನರ ಕೂಟವನ್ನು ಅಕ್ರಮ ಕೂಟವೆಂದು ಪರಿಗಣಿಸಿ, ಆದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: