ಕ್ರೀಡೆ

ಉದಯೋನ್ಮುಖ ಆಟಗಾರ ಪೃಥ್ವಿ ಶಾಗೆ ಹುಟ್ಟುಹಬ್ಬದ ಸಂಭ್ರಮ: ಕಮ್ ಬ್ಯಾಕ್ ತವಕ

ನವದೆಹಲಿ,ನ.9-ಟೀಂ ಇಂಡಿಯಾದ ಉದಯೋನ್ಮುಖ ಆಟಗಾರ ಪೃಥ್ವಿ ಶಾಗೆ ಇಂದು 20ನೇ ವರ್ಷದ  ಹುಟ್ಟುಹಬ್ಬದ ಸಂಭ್ರಮ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪೃಥ್ವಿ ಶಾ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡುವ ತವಕದಲ್ಲಿದ್ದಾರೆ. ಉದ್ದೀಪನಾ ಮದ್ದು ಸೇವನೆಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪೃಥ್ವಿ ಶಾಗೆ ಎಂಟು ತಿಂಗಳುಗಳ ನಿಷೇಧ ಶಿಕ್ಷೆಯನ್ನು ವಿಧಿಸಿತ್ತು.

ಇದೀಗ ಎಂಟು ತಿಂಗಳ ನಿಷೇಧದ ಶಿಕ್ಷೆ ಮುಕ್ತಾಯಗೊಳ್ಳುತ್ತಿದ್ದು, ಪೃಥ್ವಿ ಶಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.

ಪೃಥ್ವಿ ಶಾ ಕೆಮ್ಮಿನ ಔಷಧಿ ಸೇವನೆಯ ವೇಳೆ ತಮ್ಮ ಅರಿವಿಗೆ ಬಾರದೆ ನಿಷೇಧಿತ ರಾಸಾಯನಿಕ ಅಂಶವು ಪೃಥ್ವಿ ದೇಹವನ್ನು ಸೇರಿತ್ತು. ಇದರಿಂದ ಡೋಪಿಂಗ್ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿತ್ತು. ಮಾರ್ಚ್ 16ರಿಂದ ನವೆಂಬರ್ 15ರವರೆಗೆ ಪೃಥ್ವಿ ಶಾರನ್ನು ನಿಷೇಧಗೊಳಿಸಲಾಗಿತ್ತು.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮುಂಬಯಿ ಕ್ರಿಕೆಟ್ ಸಂಸ್ಥೆ ಆಯ್ಕೆ ಸಮಿತಿ ಮುಖ್ಯಸ್ಥ ಮಿಲಿಂದ್ ರೆಗೆ, ಪೃಥ್ವಿ ಶಾ ಆಯ್ಕೆಯನ್ನು ಪರಿಗಣಿಸಲಾಗುವುದು. ಈ ಬಗ್ಗೆ ಚರ್ಚೆ ಸಮಾಲೋಚಿಸಲಾಗುವುದು. ಪೃಥ್ವಿ ಶಾ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಭರವಸೆ ನೀಡಲಾರೆ. ಆದರೆ ಖಂಡಿತವಾಗಿಯೂ ಪೃಥ್ವಿ ಶಾ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಚಾಲ್ತಿಯಲ್ಲಿರುವಂತೆಯೇ ಮೊದಲ ಮೂರು ಪಂದ್ಯಗಳಿಗಷ್ಟೇ ಮುಂಬಯಿ ತಂಡವನ್ನು ಘೋಷಿಸಲಾಗಿದೆ. ಅಲ್ಲದೆ ಶಾ ಆಯ್ಕೆ ಪರಿಗಣಿಸುವುದರ ಮೊದಲು ಗುಂಪು ಹಂತದಲ್ಲಿ ಏಳು ಪಂದ್ಯಗಳ ಪೈಕಿ ಆರು ಪಂದ್ಯಗಳನ್ನು ಆಡಲಿದೆ.

2018ರಲ್ಲಿ ಅಂಡರ್ 19 ವಿಶ್ವಕಪ್ ವಿಜೇತ ಭಾರತ ಕಿರಿಯ ತಂಡದ ನಾಯಕರಾಗಿದ್ದ ಪೃಥ್ವಿ ಶಾ, ತದಾ ಬಳಿಕ ವೆಸ್ಟ್‌ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದರು.

ಅಲ್ಲದೆ ತಾವಾಡಿದ ಎರಡು ಪಂದ್ಯಗಳಲ್ಲೇ ಶತಕ ಹಾಗೂ ಅರ್ಧಶತಕ ಸೇರಿದಂತೆ 237 ರನ್ ಪೇರಿಸಿದ್ದರು. ಆದರೆ ಗಾಯದಿಂದಾಗಿ ಆಸ್ಟ್ರೇಲಿಯಾ ಸರಣಿ ಮಿಸ್ ಮಾಡಿಕೊಂಡಿದ್ದರು. ಐಪಿಎಲ್‌ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಪರ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: