ಕರ್ನಾಟಕಪ್ರಮುಖ ಸುದ್ದಿ

ಅಯೋಧ್ಯೆ ತೀರ್ಪು: ರಾಜಕೀಯ ನಾಯಕರ ಪ್ರತಿಕ್ರಿಯೆ

ಬೆಂಗಳೂರು,ನ.9-ದಶಕಗಳ ಕಾಲದ ಅಯೋಧ್ಯೆ ಭೂ ವಿವಾದದ ತೀರ್ಪು ಪ್ರಕಟವಾಗಿದೆ. ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಜೊತೆಗೆ ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಿ ಎಂದು ತೀರ್ಪು ನೀಡಿದೆ.

ಸುಪ್ರೀಂ ತೀರ್ಪಿನ ಬಗ್ಗೆ ರಾಜಕೀಯ ನಾಯಕರು ಟ್ವಿಟ್ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಸಚಿವರಾದ ಸಿ.ಟಿ.ರವಿ, ಸುರೇಶ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ಸಚಿವರಾದ ಬಿ. ಶ್ರೀರಾಮುಲು, ಬಸವರಾಜ್ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸೋಣ. ಇದು ಯಾರೊಬ್ಬರ ಗೆಲುವು ಅಥವಾ ಸೋಲು ಎಂದು ಭಾವಿಸಬೇಡಿ . ಉದ್ವೇಗಕ್ಕೆ ಒಳಗಾಗಬೇಡಿ , ಯಾರೂ ವಿಜೃಂಭಿಸಬೇಡಿ. ಸಮಾಜದ ಸಾಮರಸ್ಯ ಕದಡದೆ, ಶಾಂತಿ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಮ ಜನ್ಮ ಭೂ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ಅಂದಹಾಗೆ `ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ…’ ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ ಎಂದು ಟ್ವಿಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವ್ಯಾಜ್ಯದ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ ಎಂದು ಟ್ವೀಟ್ ಮಾಡಿದ್ದಾರೆ.

ಸಚಿವ ಸಿ.ಟಿ.ರವಿ, ರಾಮಮಂದಿರ ನಿರ್ಮಿಸಲು ವಿವಾದಿತ ಭೂಮಿಯನ್ನು ಹಿಂದೂಗಳಿಗೆ ನೀಡಿದ ಸುಪ್ರೀಂ ಕೋರ್ಟ್ ನ ತೀರ್ಪನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ. ಮಸೀದಿ ನಿರ್ಮಿಸಲು ಮುಸ್ಲಿಂರಿಗೆ ಪ್ರತ್ಯೇಕವಾಗಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿರುವುದು ಸರಿಯಾದ ಹೆಜ್ಜೆ. ಭಾರತ ಇಂದು ಗೆದ್ದಿದೆ. ಜೈ ಶ್ರೀ ರಾಮ್ ಎಂದು ಟ್ವೀಟ್ ಮಾಡಿದ್ದಾರೆ.

ಸಂಸದ ಪ್ರತಾಪ್ ಸಿಂಹ, ನನ್ನ ತಂದೆ ಇಟ್ಟಿಗೆಯನ್ನು ನಮ್ಮೂರ ಗಡಿಯಲ್ಲಿ ಸ್ವೀಕರಿಸಿ ಅರ್ಧ ಕಿಲೋಮೀಟರ್ ಮೆರವಣಿಗೆಯಲ್ಲಿ ತಂದು ಬಿರಡಹಳ್ಳಿಯ ಮಾರಿಗುಡಿಯ ಮುಂದಿಟ್ಟು ಪೂಜೆ ಮಾಡಿ, ನಾವೆಲ್ಲ ನಮಸ್ಕರಿಸಿ ಕಳಿಸಿದ ನೆನಪು ಇನ್ನೂ ಹಸಿಯಾಗಿಯೇ ಇದೆ! ಎಂದು ಟ್ವೀಟ್ ಮಾಡಿದ್ದಾರೆ.

ಆರೋಗ್ಯ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಅಯೋಧ್ಯೆ ಇನ್ನು ವಿವಾದವಲ್ಲ. ಅಯೋಧ್ಯೆ ಹಿಂದೂಗಳದ್ದು. ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಈ ತೀರ್ಪಿನಿಂದ ಭಾರತೀಯರ ಪುರಾಣ, ನಂಬಿಕೆ, ಆಚರಣೆಗಳಿಗೆ ನ್ಯಾಯಾಂಗದಲ್ಲೂ ಮಾನ್ಯತೆ ಇದೆ ಎಂಬುದು ಸ್ಪಷ್ಟವಾಗಿದೆ. ಅಯೋಧ್ಯೆಯಲ್ಲಿ ರಾಮನ ಜನ್ಮಸ್ಥಳ, ಅಲ್ಲಿ ಮಂದಿರ ಇದ್ದದ್ದೂ ಹೌದು, ಮಸೀದಿ ನಿರ್ಮಿಸಿದ್ದೂ ಹೌದು. ಆದರೆ, ಮೊದಲು ಇದ್ದದ್ದು ಮಂದಿರ. ಹೀಗಾಗಿ ಅಯೋಧ್ಯೆಯ ರಾಮಜನ್ಮಭೂಮಿಯನ್ನು ಹಿಂದೂಗಳಿಗೆ ನೀಡಿ, ಮುಸ್ಲಿಮರಿಗೆ ಅಯೋಧ್ಯೆಯಲ್ಲೇ ಪರ್ಯಾಯ ಜಮೀನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳುವ ಮೂಲಕ ನ್ಯಾಯಾಂಗವೂ ಭಾರತವೆಂದರೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದೆ ಎಂದು ಹೇಳಿದ್ದಾರೆ.

ಸಚಿವ ಸುರೇಶ್ ಕುಮಾರ್, ಸೌಹಾರ್ದತೆ ಕಾಪಾಡೋಣ ಎಂದು ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನ್ಯಾಯಪೀಠ ಎಲ್ಲರಿಗೂ ಒಪ್ಪಿತ ಸರ್ವ ಸಮ್ಮತ ತೀರ್ಪುನ್ನು ಪ್ರಕಟಿಸಿದೆ. ಇದೊಂದು ಐತಿಹಾಸಿಕ ತೀರ್ಪು ಎಲ್ಲ ಧರ್ಮದವರು ಸಹ ತೀರ್ಪು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಸಚಿವ ಕೆ.ಎಸ್.ಈಶ್ವರಪ್ಪ, ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕವಾಗಿದ್ದು ಇದನ್ನು ಇಡೀ ಭಾರತ ದೇಶ ಸ್ವಾಗತಿಸಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡ ಹಾಗೂ ಆರ್‌ಎಸ್‌ಎಸ್‌ನ ಸಂಚಾಲಕ ಮೋಹನ್ ಭಾಗತ್ ಏನು ತೀರ್ಮಾನಿಸುತ್ತಾರೋ ಅದರಂತೆ ನಾವು ನಡೆದುಕೊಳ್ಳಲಿದ್ದೇವೆ ಎಂದು ಹೇಳಿದರು.

ಸದಾಶಿವನಗರದ ನಿವಾಸದಲ್ಲಿ ಈ ಸಂಬಂಧ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್, ಎಲ್ಲರು ಶಾಂತಿ, ಸೌಹಾರ್ದತೆ ಕಾಪಾಡಬೇಕು. ಅಯೋಧ್ಯೆ ತೀರ್ಪು ವಿಚಾರ ಬಗ್ಗೆ ತಾವು ಮಾತನಾಡುವುದಿಲ್ಲ‌ ಎಂದರು.

ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್, ಭಾರತ ಸುಪ್ರೀಂಕೋರ್ಟ್‌ ತೀರ್ಪನ್ನು ಗೌರವಿಸುತ್ತದೆ ಮತ್ತು ಅಭಿನಂದಿಸುತ್ತದೆ. ದಶಕಗಳ ಕಾಲದ ವಿವಾದಕ್ಕೆ ತೆರೆ ಬಿದ್ದಿದೆ ಎಂದು ಟ್ವೀಟ್ ಮಾಡಿದ್ದಾರೆ.

 

 

Leave a Reply

comments

Related Articles

error: