ಕ್ರೀಡೆ

ಬಾಂಗ್ಲಾ ವಿರುದ್ಧ 3ನೇ ಟಿ20 ಪಂದ್ಯ: ದೀಪಕ್ ಚಾಹರ್ ಹ್ಯಾಟ್ರಿಕ್ ವಿಕೆಟ್; ಭಾರತಕ್ಕೆ ಸರಣಿ ಜಯ

ನಾಗ್ಪುರ,ನ.11-ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಸರಣಿಯ 3ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ 30 ರನ್‌ಗಳ ಭರ್ಜರಿ ಜಯಗಳಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 2-1ರಲ್ಲಿ ಸರಣಿ ವಶ ಪಡಿಸಿಕೊಂಡಿದೆ.

ಇಲ್ಲಿನ ವಿಸಿಎ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ತಂಡ ಭಾರತ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 5 ವಿಕೆಟ್‌ ನಷ್ಟಕ್ಕೆ 174 ರನ್ ಗಳಿಸಿತು.

175 ರನ್ ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾ ತಂಡ ಭಾರತದ ದೀಪಕ್ ಚಾಹರ್ ಬೌಲಿಂಗ್ ದಾಳಿಗೆ ನಲುಗಿ 19.2 ಓವರ್‌ಗಳಲ್ಲಿ 144 ರನ್‌ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ತಂಡ ಒಂದು ಹಂತದಲ್ಲಿ 2 ವಿಕೆಟ್‌ ನಷ್ಟದಲ್ಲಿ 110 ರನ್‌ ಗಳಿಸಿತ್ತು. ಈ ಹಂತದಲ್ಲಿ ಭಾರತ ತಂಡದ ಶಿಸ್ತಿನ ಬೌಲಿಂಗ್‌ ದಾಳಿಯಿಂದಾಗಿ 19.2 ಓವರ್‌ಗಳಲ್ಲಿ 144 ರನ್‌ಗಳಿಗೆ ಬಾಂಗ್ಲಾ ಆಲ್‌ಔಟ್‌ ಆಯಿತು.

ಮಹಮದ್ ನಯೀಮ್ (81), ಮಹಮ್ಮದ್ ಮಿಥುನ್ (27) ರನ್ ಗಳಿಸಿದ್ದು ಬಿಟ್ಟರೆ ಉಳಿದ್ಯಾವ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಲಿಟನ್ ದಾಸ್ (9), ಮಹಮುದುಲ್ಲಾ (8), ಅಮಿನುಲ್ ಇಸ್ಲಾಂ (9), ಶಫಿಯುಲ್ ಇಸ್ಲಾಂ (4), ಮುಸ್ತಫಿಜುರ್ ರಹಮಾನ್ (1), ಸೌಮ್ಯ ಸರ್ಕಾರ್, ಮುಷ್ಫಿಕುರ್ ರಹೀಂ, ಅಫಿಫ್ ಹುಸೇನ್, ಅಲ್ ಅಮೀನ್ ಹುಸೇನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ದೀಪಕ್ ಚಾಹರ್ ಹ್ಯಾಟ್ರಿಕ್‌ ಸಹಿತ 7 ರನ್‌ಗೆ 6 ವಿಕೆಟ್‌ ಪಡೆದು ವಿಶ್ವದಾಖಲೆಯ ಬೌಲಿಂಗ್ ಪ್ರದರ್ಶನ ನೀಡಿದರು. ಚಾಹರ್ ಸಾಧನೆ ಚುಟುಕು ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ಎನಿಸಿತು. 2012 ರಲ್ಲಿ ಜಿಂಬಾಬ್ವೆ ವಿರುದ್ಧ ಶ್ರೀಲಂಕಾದ ಸ್ಪಿನ್ನರ್ ಅಜಂತ ಮೆಂಡಿಸ್ 8 ರನ್ನಿಗೆ 6 ವಿಕೆಟ್ ಪಡೆದಿದ್ದು, ಇದುವರೆಗಿನ ದಾಖಲೆಯಾಗಿತ್ತು.

ಅಲ್ಲದೆ, ಟಿ20 ಯಲ್ಲಿ ಹ್ಯಾಟ್ರಿಕ್ ಸಾಧನೆಗೈದ ಭಾರತದ ಮೊದಲ ಬೌಲರ್ ಎಂಬ ಗೌರವಕ್ಕೂ ಭಾಜನರಾದರು. ಶಿವಂ ದುಬೇ 3 ವಿಕೆಟ್ ಪಡೆದು ಮಿಂಚಿದರೆ, ಯಜುವೇಂದ್ರ ಚಾಹಲ್ 1 ವಿಕೆಟ್‌ ಕಬಳಿಸಿದರು. ದೀಪಕ್ ಚಾಹರ್ ಪಂದ್ಯ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮೊದಲ ಬ್ಯಾಟಿಂಗ್ ಮಾಡಿದ ಭಾರತಕ್ಕೆ ರೋಹಿತ್ ಶರ್ಮಾ ಮೂಲಕ ಆರಂಭಿಕ ಆಘಾತ ಎದುರಾಯಿತು. ಎರಡನೇ ಓವರ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ (2) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ನಂತರ ಶಿಖರ್ ಧವನ್ (19) ಅವರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಆಸರೆಯಾದರು.

ಕೆ.ಎಲ್.ರಾಹುಲ್ (52), ಶ್ರೇಯಸ್‌ ಅಯ್ಯರ್‌ (62) ಭರ್ಜರಿ ಅರ್ಧಶತಕಗಳ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟುವಂತೆ ಮಾಡಿದರು. ಅದರಲ್ಲೂ ಸಿಡಿಲಬ್ಬದ ಬ್ಯಾಟಿಂಗ್‌ ನಡೆಸಿದ ಶ್ರೇಯಸ್‌ ಅಯ್ಯರ್‌ 15ನೇ ಓವರ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ಅಬ್ಬರಿಸಿದ್ದರು.

33 ಎಸೆತಗಳನ್ನು ಎದುರಿಸಿದ ಶ್ರೇಯಸ್‌ 3 ಫೋರ್‌ ಮತ್ತು 5 ಸಿಕ್ಸರ್‌ಗಳ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ದಾಖಲಿಸಿದರು. ರಾಹುಲ್‌ 35 ಎಸೆತಗಳಲ್ಲಿ 7 ಫೋರ್‌ಗಳೊಂದಿಗೆ 52 ರನ್‌ ಚಚ್ಚಿದರು. ನಂತರ ಬಂದ ರಿಷಭ್‌ ಪಂತ್‌ (6) ಮತ್ತೊಮ್ಮೆ ನಿರಾಸೆ ಮೂಡಿಸಿದರೆ, ಕೃಣಾಲ್ ಪಾಂಡ್ಯ ಬದಲು ಸರಣಿಯಲ್ಲಿ ಮೊದಲ ಬಾರಿ ಅವಕಾಶ ಪಡೆದ ಮನೀಶ್‌ ಪಾಂಡೆ 13 ಎಸೆತಗಳಲ್ಲಿ 22 ರನ್‌ ಬಾರಿಸಿ ಅಜೇಯರಾಗುಳಿದರು. ಶಿವಂ ದುಬೆ ಸಹ 9 ರನ್ ಗಳಿಸಿ ಔಟಾಗದೆ ಉಳಿದರು. (ಎಂ.ಎನ್)

Leave a Reply

comments

Related Articles

error: