ಮೈಸೂರು

ಕುವೆಂಪು ಅವರನ್ನು ಬಿಟ್ಟು ನಾವು ಆಧುನಿಕ ಕನ್ನಡ ಸಾಹಿತ್ಯವನ್ನು ಕಲ್ಪಿಸಿಕೊಳ್ಳುವುದು ಅಕ್ಷಮ್ಯ : ಹಿರಿಯ ಸಾಹಿತಿ ಸಿ.ಪಿ ಕೃಷ್ಣಕುಮಾರ್

ಯುಗದ ಕವಿ ಕುವೆಂಪುರವರ ಪುಣ್ಯಸ್ಮರಣೆ

ಮೈಸೂರು,ನ.11:- ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ಹಾಗೂ ಕುವೆಂಪು ಯುವ ಬಳಗದ ವತಿಯಿಂದ ಯುಗದ ಕವಿ ಕುವೆಂಪುರವರ ಪುಣ್ಯಸ್ಮರಣೆಯ ಪ್ರಯುಕ್ತ ಇಂದು ಮೈಸೂರಿನ ಗನ್ ಹೌಸ್ ಬಳಿಯಿರುವ ಕುವೆಂಪುರವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವುದರ ಜತೆಗೆ ಕಾವ್ಯ ಕೃಷಿಗೆ ನೆರಳಾಗಿದ್ದ ಕುವೆಂಪು ಅವರ ಉದ್ಯಾನದಲ್ಲಿ ನೆರಳು ಇರಲಿ ಎಂಬ ಸದಾಶಯದೊಂದಿಗೆ ಗಿಡ ನೆಡುವುದರ ಮೂಲಕ ಕುವೆಂಪುರವರ 25 ನೇ ವರ್ಷದ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭ ಹಿರಿಯ ಸಾಹಿತಿ ಸಿ.ಪಿ ಕೃಷ್ಣಕುಮಾರ್ ಮಾತನಾಡಿ  ಇಂದು ಕುವೆಂಪುರವರ ಪುಣ್ಯತಿಥಿ. ಅವರು ದೇಹರೂಪ ತ್ಯಜಿಸಿ 25 ವರ್ಷಗಳು ಕಳೆದಿವೆ. ಇದು ರಾಜ್ಯೋತ್ಸವದ ಮಾಸ ಎಂಬುದು ಅರ್ಥವತ್ತಾಗಿದೆ, ಸ್ವಾಮಿ ವಿವೇಕಾನಂದರನ್ನು ಕುವೆಂಪು ನವಯುಗ ಆಚಾರ್ಯ ಎಂದು ಕರೆದರು. ಕುವೆಂಪು ಕೂಡ ನವಯುಗ ಆಚಾರ್ಯರೇ, ಅವರನ್ನು ಬಿಟ್ಟು ನಾವು ಆಧುನಿಕ ಕನ್ನಡ ಸಾಹಿತ್ಯವನ್ನು ಕಲ್ಪಿಸಿಕೊಳ್ಳುವುದು ಅಕ್ಷಮ್ಯ. ಕನ್ನಡ ಮತ್ತು ಕುವೆಂಪು ಅಭಿನ್ನ ಅವರ ಅಸೀಮ ಕನ್ನಡ ಪ್ರೇಮ ಜನಜನೀತ,ಅವರ ವಿಶ್ವಮಾನವ ಸಂದೇಶ ಸದಾ ಅನುಕರಣೀಯ. ಬಾರಿಸು ಕನ್ನಡ ಡಿಂಡಿಮವ ಎಂಬ ಅವರ ಕರೆಗೆ ಎಲ್ಲರೂ ಜೈ ಎಂದು ದನಿಗೂಡಿಸಬೇಕು ಅದರಲ್ಲಿ ಕನ್ನಡದ ಕರ್ನಾಟಕದ ಶ್ರೇಯವಿದೆ ಎಂಬುದು ಪರಮ ಸತ್ಯ ಎಂದರು.

ಈ ವೇಳೆ ಕುವೆಂಪು ಪುತ್ಥಳಿ ಹಾಗೂ ಅಲ್ಲಿನ ಅವ್ಯವಸ್ಥೆ ಕಂಡು ಸ್ಥಳೀಯ ಕಾರ್ಪೋರೇಟರ್ ಬಿ ವಿ ಮಂಜುನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಅಸಮಾಧಾನ ಹೊರ ಹಾಕಿದರು.

ಯುವ ಮುಖಂಡರಾದ ಕವೀಶ್ ಗೌಡ ಮಾತನಾಡಿ ಕುವೆಂಪು ಸಾಹಿತ್ಯ ಲೋಕದ ಮಹಾ ಪುರುಷ. ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಇಡೀ ದೇಶದಲ್ಲಿ ಕನ್ನಡ ಸಾಹಿತ್ಯದ ಶ್ರೇಷ್ಠತೆ ಗಮನಕ್ಕೆ ಬಂದಿತು.

‘ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ಸಾವಿರಾರು ವರ್ಷದ ಪ್ರಾಚೀನ ಚರಿತ್ರೆ ಮತ್ತು ಪರಂಪರೆ ಇದೆ. ವಿಶ್ವವಿಖ್ಯಾತ ತಜ್ಞರು, ಕವಿಗಳು, ಸಾಹಿತಿಗಳು, ವಿಜ್ಞಾನಿಗಳು ಅನೇಕ ಮಹಾಪುರುಷರು ಕನ್ನಡದ ಹೆಸರನ್ನು ವಿಶ್ವದ ಎಲ್ಲೆಡೆ ಪಸರಿಸಿದ್ದಾರೆ. ಅಲ್ಲದೆ ನಮ್ಮ ಜನಪದರು ಕನ್ನಡವನ್ನು ಜೀವಂತವಾಗಿ ಇಟ್ಟಿದ್ದಾರೆ. ಯಾವೊಂದು ಭಾಷೆಯ ಅನಿವಾರ್ಯತೆ ಇದ್ದರೂ ಕನ್ನಡ ಭಾಷೆ ನಮ್ಮ ಉಸಿರಾಗಿ, ಬದುಕಾಗಿ ರೂಢಿಸಿಕೊಳ್ಳಬೇಕು. ನಮ್ಮ ನಾಡಗೀತೆ ಹಾಗೂ ರೈತ ಗೀತೆಯನ್ನು ರಚಿಸುವುದರ ಮೂಲಕ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಮೆರುಗು ತಂದವರು ಕುವೆಂಪು. ಅವರು ಸಾಹಿತ್ಯ ಲೋಕದ ಮಹಾ ಪುರುಷ. ಅವರನ್ನು ಸದಾಕಾಲ ಕನ್ನಡಿಗರು ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ ,ಉಪಾಧ್ಯಕ್ಷ ಕುಮಾರ್ ಗೌಡ,ಒಕ್ಕಲಿಗರ ಜಿಲ್ಲಾ ಸಂಘದ ನಿರ್ದೇಶಕ ರವಿ ಎ,ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಐಯಂಗಾರ್, ಸ್ವರೂಪ್, ಮೋಹಿತ್ ಗೌಡ,ಸಂತೋಷ್,ಗಿರೀಶ್ ಗೌಡ,ಹರೀಶ್ ಗೌಡ,ಕಾರ್ತಿಕ್,ತೇಜಸ್, ಸುಧೀಂದ್ರ ,ಮೋಹನ್ ಕುಮಾರ್ ಗೌಡ ,ಇತರರು ಹಾಜರಿದ್ದು ಕುವೆಂಪುರವರ ಸಾಧನೆಗಳನ್ನು ಸ್ಮರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: