ಪ್ರಮುಖ ಸುದ್ದಿ

ಮಳೆಹಾನಿ ಪರಿಹಾರ ಕಾರ್ಯ ವಿಳಂಬಕ್ಕೆ ಶಾಸಕರು ಕಾರಣ : ಯು.ಟಿ.ಖಾದರ್ ಟೀಕೆ

ರಾಜ್ಯ(ಮಡಿಕೇರಿ) ನ.13 : -ಮಳೆಹಾನಿ ಪರಿಹಾರ ಕಾರ್ಯಗಳು ವಿಳಂಬವಾಗಲು ಆಯಾ ಕ್ಷೇತ್ರದ ಶಾಸಕರುಗಳೇ ಕಾರಣವೆಂದು ಆರೋಪಿಸಿರುವ ಮಾಜಿ ಸಚಿವ ಯು.ಟಿ.ಖಾದರ್ ತಮ್ಮ ತಮ್ಮ ಕ್ಷೇತ್ರಗಳ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿ ಶಾಸಕರುಗಳ ಮೇಲೂ ಇದೆ ಎಂದು ತಿಳಿಸಿದ್ದಾರೆ.
ಹಿಂದಿನ ಸಮ್ಮಿಶ್ರ ಸರ್ಕಾರ ಅತಿವೃಷ್ಟಿಯಿಂದ ಉಂಟಾದ ಪ್ರಾಕೃತಿಕ ವಿಕೋಪಗಳ ಸಂದರ್ಭ ಸಂಕಷ್ಟದಲ್ಲಿ ಸಿಲುಕಿದವರ ಕಣ್ಣೀರನ್ನು ಹೇಗೆ ಒರೆಸಬಹುದೆನ್ನುವುದನ್ನು ತನ್ನ ಕೆಲಸ ಕಾರ್ಯಗಳಿಂದ ತೋರಿಸಿಕೊಟ್ಟಿದೆ. ಆ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ.ರಾ.ಮಹೇಶ್, ವಸತಿ ಸಚಿವನಾಗಿದ್ದ ತಾನು ನೊಂದವರ ಸಂಕಷ್ಟಕ್ಕೆ ಸ್ಪಂದಿಸಿರುವುದಲ್ಲದೆ, ಅಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅರನ್ನು ಈ ವಿಚಾರದಲ್ಲಿ ಅಭಿನಂದಿಸ ಬೇಕಾಗುತ್ತದೆ ಎಂದು ಖಾದರ್ ಹೇಳಿದರು.
ನಮ್ಮ ಅಧಿಕಾರದ ಅವಧಿಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಆರಂಭಿಕ ಹಂತದಲ್ಲಿ ತಲಾ 1.03 ಲಕ್ಷ ರೂ. ಪರಿಹಾರವನ್ನು ಒದಗಿಸಿದ್ದಲ್ಲದೆ, ಮನೆ ಸಾಮಾಗ್ರಿಗಳನ್ನು ಪಡೆದುಕೊಳ್ಳಲು 50 ಸಾವಿರ ರೂ.ಗಳನ್ನು ನೀಡಲಾಗಿತ್ತು. ಕ್ಷಿಪ್ರಗತಿಯಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾಗಿ ತಿಳಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಂತ್ರಸ್ತರ ಪರಿಹಾರ ಕಾರ್ಯಗಳು ಶೀಘ್ರ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಸಕರುಗಳದ್ದಾಗಿದೆ ಎಂದು ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: