ಪ್ರಮುಖ ಸುದ್ದಿ

ಪಠ್ಯ ಪುಸ್ತಕದಿಂದ ಟಿಪ್ಪುವಿನ ವಿಷಯ ಕುರಿತು ವಿಷಯ ತಜ್ಞರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಭರವಸೆಯಿದೆ : ಶಾಸಕ ಅಪ್ಪಚ್ಚು ರಂಜನ್

ರಾಜ್ಯ( ಮಡಿಕೇರಿ),ನ.13:- ಪಠ್ಯ ಪುಸ್ತಕದಿಂದ ಟಿಪ್ಪುವಿನ ವಿಷಯವನ್ನು ಕೈಬಿಡುವಂತೆ ಈಗಾಗಲೇ ಪಠ್ಯ ಪುಸ್ತಕ ತಜ್ಞರಿಗೆ ಸಮರ್ಪಕ ದಾಖಲೆಗಳೊಂದಿಗೆ 15 ಪುಟಗಳ ವರದಿಯನ್ನು ನೀಡಲಾಗಿದ್ದು, ಈ ದಿಸೆಯಲ್ಲಿ ವಿಷಯ ತಜ್ಞರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಟಿಪ್ಪು ಸುಲ್ತಾನ ಓರ್ವ ಕ್ರೂರಿ ಮತ್ತು ಮತಾಂಧ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಟಿಪ್ಪು ಸುಲ್ತಾನ್ ಪರ್ಷಿಯನ್ ಭಾಷೆಯಲ್ಲಿ ಬರೆದಿರುವ ಒಟ್ಟು 35 ಪತ್ರಗಳನ್ನು ವಿಲಿಯಂ ಪ್ಯಾಟ್ರಿಕ್ ಎಂಬ ಭಾಷಾ ತಜ್ಞರು ಇಂಗ್ಲಿಷ್ ಭಾಷೆಗೆ ಅನುವದಿಸಿದ್ದಾರೆ. ಇದನ್ನು ತಾವು ವಕೀಲ ಅಭಿಮನ್ಯು ಕುಮಾರ್ ಅವರಿಂದ ಕನ್ನಡಕ್ಕೆ ತರ್ಜುಮೆ ಮಾಡಿಸಿಕೊಂಡು ಪಠ್ಯ ಪುಸ್ತಕ ವಿಷಯ ತಜ್ಞರಿಗೆ ನೀಡಿದ್ದೇನೆ. ಮಾತ್ರವಲ್ಲದೇ ಸುಮಾರು 3 ಗಂಟೆಗಳ ಕಾಲ ಈ ವರದಿಯ ಬಗ್ಗೆ ಚರ್ಚೆಯೂ ನಡೆದಿದೆ ಎಂದು ರಂಜನ್ ಹೇಳಿದರು. ಟಿಪ್ಪು ಸುಲ್ತಾನ್ ಬರೆದಿರುವ ಪತ್ರಗಳಲ್ಲಿ 70 ಸಾವಿರ ಜನರನ್ನು ಮತಾಂತರ ಮಾಡಿರುವುದು, 10 ಸಾವಿರ ಜನರನ್ನು ಕೊಲೆ ಮಾಡಿರುವುದು, 400 ದೇವಾಲಯ ಲೂಟಿ ಮಾಡಿರುವುದನ್ನು ಆತನೆ ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲದೇ ಕೊಡಗಿನ ದೇವಟ್ಟಿ ಪರಂಬುವಿನಲ್ಲಿ ಫ್ರೆಂಚ್ ಸೈನಿಕರನ್ನು ಬಳಸಿಕೊಂಡು ಸಾವಿರಾರು ಕೊಡವರನ್ನು ಕೊಂದಿರುವುದು, ಉಳಿದವರನ್ನು ಶ್ರೀರಂಗ ಪಟ್ಟಣಕ್ಕೆ ಕರೆದೊಯ್ದು ಬಲವಂತವಾಗಿ ಮತಾಂತರ ಮಾಡಿದ್ದಾನೆ. ಇದಕ್ಕೆ ಕೊಡಗು ಜಿಲ್ಲೆಯಲ್ಲಿರುವ ಕೊಡವ ಮಾಪಿಳ್ಳೆಗಳೇ ಸಾಕ್ಷಿಯಾಗಿದ್ದಾರೆ ಎಂದು ಅಪ್ಪಚ್ಚು ರಂಜನ್ ಹೇಳಿದರು. ಕೊಡಗಿನ ನೂರಾರು ದೇವಾಲಯಗಳು ಆತನಿಂದ ದ್ವಂಸವಾಗಿದೆ. ಇದಕ್ಕೆ ಭಾಗಮಂಡಲದಲ್ಲಿರುವ ಆನೆ ಶಿಲ್ಪಗಳೇ ಸಾಕ್ಷಿಯಾಗಿದೆ. ಹೀಗಿದ್ದರೂ ಆತನನ್ನು ಸರ್ವ ಧರ್ಮ ಪ್ರೇಮಿ ಎನ್ನುತ್ತಿರುವುದೇಕೆ ಎಂದು ರಂಜನ್ ಪ್ರಶ್ನಿಸಿದರು.
ಟಿಪ್ಪು ಸುಲ್ತಾನ್ 1750ರಲ್ಲಿ ಜನಿಸಿ 1799ರ ಡಿಸೆಂಬರ್ 20ರಂದು ಮೃತಪಟ್ಟಿದ್ದಾನೆ ಎಂದು ಇತಿಹಾಸ ಹೇಳುತ್ತದೆ. ಆದರೆ 1857ರಲ್ಲಿ ಭಾರತದಲ್ಲಿ ಮೊದಲ ಸ್ವಾತಂತ್ರ ಸಂಗ್ರಾಮ ನಡೆದಿದೆ. ಈ ಘಟನೆ ನಡೆಯುವ ಮುನ್ನವೇ ಟಿಪ್ಪು ಸುಲ್ತಾನ್ ಮೃತಪಟ್ಟಿದ್ದರೂ, ಆತನನ್ನು ಸ್ವಾತಂತ್ರ ಹೋರಾಟಗಾರ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಮೈಸೂರಿನ ಅಯ್ಯಂಗಾರ್ ಕುಟುಂಬದ 700 ಜನರನ್ನು ದೀಪಾವಳಿ ದಿನವೇ ಟಿಪ್ಪು ಕೊಂದು ಹಾಕಿದ್ದಾನೆ. ಹೀಗಾಗಿ ಮೈಸೂರಿನ ಅಯ್ಯಂಗಾರಿಗಳು ದೀಪಾವಳಿಯನ್ನು ಕರಾಳ ದಿನವನ್ನಾಗಿ ಆಚರಿಸುತ್ತಾರೆ. ಮಾತ್ರವಲ್ಲದೇ ಮೈಸೂರು ಅರಸರನ್ನೇ ಬಂಧಿಸಿ ಸೆರೆ ಮನೆಯಲ್ಲಿ ಇಟ್ಟಿದ್ದ. ಮಂಗಳೂರಿನಲ್ಲಿ ಕ್ರೈಸ್ತರನ್ನು ಹತೈ ಮಾಡಿದ್ದಲ್ಲದೇ, ಮತಾಂತರ ಮಾಡಿದ್ದಾನೆ. ಈ ಎಲ್ಲಾ ವಿಚಾರವನ್ನು ಆತನೆ ಬರೆದ ಪತ್ರಗಳಲ್ಲಿ ಹೇಳಿಕೊಂಡಿದ್ದಾನೆ. ಈ ಎಲ್ಲಾ ವಿಚಾರಗಳನ್ನು ಸವಿವರವಾಗಿ ರಾಜ್ಯ ಪಠ್ಯ ಪುಸ್ತಕ ವಿಷಯ ತಜ್ಞರ ಮುಂದೆ ದಾಖಲೆ ಸಹಿತ ವಿವರಿಸಿರುವುದಾಗಿ ಅಪ್ಪಚ್ಚು ರಂಜನ್ ಹೇಳಿದರು.
ಇಂತಹ ಕ್ರೂರಿಯ ಬಗ್ಗೆ ಮಕ್ಕಳು ಅಧ್ಯಯನ ನಡೆಸಬಾರದು. ಹಾಗೊಂದು ವೇಳೆ ಅಧ್ಯಯನ ನಡೆಸಬೇಕು ಎಂದಾದರೆ ಆತನ ಸಂಪೂರ್ಣ ಚರಿತ್ರಯನ್ನು ಅಭ್ಯಾಸ ಮಾಡಲು ಅನುವು ಮಾಡಿಕೊಡಬೇಕು. ಇದರಿಂದ ಆತನ ಜೀವನ ಚರಿತ್ರೆಯೂ ಮಕ್ಕಳಿಗೆ ತಿಳಿಯುವಂತಾಗಲಿ ಎಂದು ಅಪ್ಪಚ್ಚು ರಂಜನ್ ಪ್ರತಿಪಾದಿಸಿದರು. ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನನ ವಿಷಯವನ್ನು ತೆಗೆದು ಹಾಕುವುದಕ್ಕೆ ಮೊದಲ ಆಧ್ಯತೆ ನೀಡಬೇಕು ಅಪ್ಪಚ್ಚು ರಂಜನ್ ಸರಕಾರವನ್ನು ಒತ್ತಾಯಿಸಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಟಿಪ್ಪು ಜಯಂತಿ ರದ್ದು ಮಾಡುವುದಾಗಿ ಹೇಳಿತ್ತು. ಅದರಂತೆ ಟಿಪ್ಪು ಜಯಂತಿಯನ್ನು ರದ್ದು ಮಾಡಲಾಗಿದೆ.
ರಾಜ್ಯದಲ್ಲಿ 50ಕ್ಕೂ ಹೆಚ್ಚು ವರ್ಷ ಕಾಲ ಕಾಂಗ್ರೇಸ್ ಸರಕಾರ ಆಡಳಿತ ನಡೆಸಿದೆ. ಆ ಸಂದರ್ಭ ಟಿಪ್ಪು ಸುಲ್ತಾನನ ಜಯಂತಿಯನ್ನು ಆಗಿನ ಮುಖ್ಯಮಂತ್ರಿಗಳು ಏಕೆ ಆಚರಿಸಲಿಲ್ಲ ಎಂದು ಪ್ರಶ್ನಿಸಿದ ರಂಜನ್, ಅಂದಿನ ಮುಖ್ಯಮಂತ್ರಿಗಳಿಗೆ ಟಿಪ್ಪು ಸುಲ್ತಾನನ ಕ್ರೂರ ಇತಿಹಾಸ ತಿಳಿದಿತ್ತು. ಮಾತ್ರವಲ್ಲದೇ ಇಸ್ಲಾಂನಲ್ಲಿ ವ್ಯಕ್ತಿ ಪೂಜೆ ಮಾಡುವಂತಿಲ್ಲ ಎಂಬ ಅರಿವಿತ್ತು. ಆದರೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಓಟ್ ಬ್ಯಾಂಕ್ ರಾಜಕೀಯ ಮಾಡಲು ಮಾತ್ರವೇ ಟಿಪ್ಪು ಸುಲ್ತಾನನ ಜಯಂತಿ ಆಚರಿಸಿ ಸಮಾಜದ ಶಾಂತಿ ಸಾಮರಸ್ಯ ಕದಡಿದರು ಎಂದು ಅಪ್ಪಚ್ಚು ರಂಜನ್ ಆರೋಪಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: