ಪ್ರಮುಖ ಸುದ್ದಿ

ನ.17 : ‘’ದೊಡ್ಡ ವೀರರಾಜೇಂದ್ರ ಒಡೆಯರ್’’’ ಸ್ಮಾರಕ ವೀರಶೈವ ಲಿಂಗಾಯಿತ ಕ್ರೀಡಾಕೂಟ

ರಾಜ್ಯ( ಮಡಿಕೇರಿ) ನ.14 :- ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ವತಿಯಿಂದ ‘’ದೊಡ್ಡ ವೀರರಾಜೇಂದ್ರ ಒಡೆಯರ್’’’ ಸ್ಮಾರಕ ಜಿಲ್ಲಾ ಮಟ್ಟದ ವೀರಶೈವ ಲಿಂಗಾಯಿತ ಕ್ರೀಡಾಕೂಟ ನ.17 ರಂದು ಬಸವನಹಳ್ಳಿ ಸರ್ಕಾರಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ಎಸ್. ಮಹೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟದಂದು ಬೆಳಗ್ಗೆ 8 ಗಂಟೆಗೆ ಕೊಪ್ಪಗೇಟ್ ಸಮೀಪವಿರುವ ಕಾವೇರಿ ಪ್ರತಿಮೆ ಬಳಿಯಿಂದ ಕ್ರೀಡಾಜ್ಯೋತಿಯೊಂದಿಗೆ ಬೈಕ್ ಜಾಥ ಬಸವನಹಳ್ಳಿಯವರೆಗೆ ನಡೆಯಲಿದ್ದು, ಇದಕ್ಕೆ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದರು. ಜಾಥಾದಲ್ಲಿ ಸುಮಾರು 500 ಕ್ಕೂ ಅಧಿಕ ಮಂದಿ ಬೈಕ್‍ಗಳ ಮೂಲಕ ಪರಿಸರ ರಕ್ಷಣೆ, ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಸಂದೇಶ ಸಾರಲಿದ್ದಾರೆ. ನಂತರ ಬಸವನಹಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಆರಂಭವಾಗಲಿರುವ ಕ್ರೀಡಾಕೂಟಕ್ಕೆ ಕೊಡಗು ಮೂಲದ ಬೆಂಗಳೂರಿನ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ತರಬೇತುದಾರರಾಗಿರುವ ದೇವರಾಜಮ್ಮ ಅವರು ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠ ಕೊಡ್ಲಿಪೇಟೆಯ ಸದಾಶಿವ ಸ್ವಾಮೀಜಿ, ಕಲ್ಲುಮಠ ಕೊಡ್ಲಿಪೇಟೆ ಮಹಾಂತ ಸ್ವಾಮೀಜಿ, ಕನ್ನಡ ಮಠ ಅಮ್ಮತ್ತಿ ವೀರಾಜಪೇಟೆಯ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಮುದ್ದಿನಕಟ್ಟೆ ಮಠ ಶನಿವಾರಸಂತೆಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠ ತೊರೆನೂರು ಮಲ್ಲೇಶ ಸ್ವಾಮೀಜಿ, ತೋಂಟದಾರ್ಯ ಸಂಸ್ಥಾನ ಮಠ. ಬಸವಾಪಟ್ಟಣ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ತಪೋವನ ಕ್ಷೇತ್ರ, ಮನೆಹಳ್ಳಿ, ಶನಿವಾರಸಂತೆಯ ಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಳಲೆಮಠ ಶನಿವಾರಸಂತೆಯ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿಮಠ, ಕೊಡ್ಲಿಪೇಟೆಯ ರುದ್ರಮುನಿ ಸ್ವಾಮೀಜಿ ವಹಿಸಲಿದ್ದಾರೆ.ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಹೆಚ್.ವಿ. ಶಿವಪ್ಪ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜೆ.ಎಸ್.ಎಸ್.ವಿಜ್ಞಾನ ಮತ್ತು ತಾಂತ್ರಿಕ ವಿಶ್ವ ವಿದ್ಯಾನಿಲಯದ ಪ್ರೊಫೆಸರ್ ಹಾಗೂ ಮಾಜಿ ರಾಷ್ಟ್ರೀಯ ಹಾಕಿ ಆಟಗಾರ್ತಿ ಡಾ. ಸಿಂಧೂ ಭರತ್, ಅಂತರರಾಷ್ಟ್ರೀಯ ಸೈಕ್ಲಿಂಗ್ ಪಟು ಕೆ.ಎನ್. ರಜನೀಶ್, ರಾಜ್ಯ ಉಚ್ಛನ್ಯಾಯಲಯದ ಹಿರಿಯ ವಕೀಲರಾದ ಹೆಚ್.ಎಸ್. ಚಂದ್ರಮೌಳಿ, ಮಾಹಿತಿ ಮತ್ತು ಹಕ್ಕು ಆಯೋಗದ ನಿವೃತ್ತ ಆಯುಕ್ತರಾದ ವಿರೂಪಾಕ್ಷಯ್ಯ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರದೀಪ್ ಕಂಕಣವಾಡಿ, ಉದ್ಯಮಿ ಸಂದೀಪ್ ರುದ್ರಯ್ಯ, ರಾಜ್ಯ ವೀರಶೈವ ಮಹಾಸಭಾದ ಕಾರ್ಯದರ್ಶಿ ರಾಜೇಶ್ವರಿ ನಾಗರಾಜು, ಕೊಡಗು ಪ್ರಧಾನ ಕಾರ್ಯದರ್ಶಿ ಶಾಂಭ ಶಿವಮೂರ್ತಿ, ವೀರಶೈವ ಮಹಾಸಭಾದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಬಿ.ಹಾಲಪ್ಪ, ವೀರಾಜಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸಂದೀಪ್, ಜಿಲ್ಲಾ ಖಜಾಂಚಿ ಉದಯಕುಮಾರ್, ಶರಣ ಸಾಹಿತ್ಯ ಪರಿಷತ್‍ನ ಸೋಮವಾರಪೇಟೆ ಅಧ್ಯಕ್ಷ ಮಹದೇವಪ್ಪ, ವೀರಶೈವ ಮಹಾಸಭಾದ ನಿರ್ದೇಶಕರುಗಳಾದ ಶುಭಶೇಖರ್, ನವೀನ್ ಕುಮಾರ್ ಹಾಗೂ ನಟೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಮಹೇಶ್ ತಿಳಿಸಿದರು.
ಕ್ರೀಡಾಕೂಟದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, 40 ವರ್ಷ ಒಳಗಿನ ಮತ್ತು ಮೇಲ್ಪಟ್ಟ ಪುರುಷರಿಗೆ ಶಟಲ್ ಡಬಲ್ಸ್, ಅಂಗನವಾಡಿ, ಎಲ್‍ಕೆಜಿ, ಯುಕೆಜಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆಕುಪ್ಪಳಿಸುವುದು, 1 ರಿಂದ 3ನೇ ತರಗತಿವರೆಗಿನ ಮಕ್ಕಳಿಗೆ 50 ಮೀಟರ್ ಓಟ, ಸ್ಟಿಕ್ಕರ್ ಅಂಟಿಸುವುದು, 4 ರಿಂದ 5ನೇ ತರಗತಿಗೆ 100 ಮೀ. ಓಟ, ಒಂಟಿಕಾಲು ಓಟ, 6 ರಿಂದ 7ನೇ ತರಗತಿಗೆ 100 ಮೀ. ಓಟ, ಬಲೂನು ಒಡೆಯುವುದು, 8 ರಿಂದ 10ನೇ ತರಗತಿ ಮಕ್ಕಳಿಗೆ 100 ಮೀ.ಓಟ, ಬಾಲಕರಿಗೆ ಗೋಣಿಚೀಲ ಓಟ, ಬಾಲಕಿಯರಿಗೆ ನಿಂಬೆ ಚಮಚ ಓಟ, ಕಾಲೇಜು ವಿದ್ಯಾರ್ಥಿಗಳಿಗೆ 100 ಮೀ. ಓಟ, ಬಾಲಕರಿಗೆ ಮೂರು ಕಾಲು ಓಟ, ಬಾಲಕಿಯರಿಗೆ ನಿಂಬೆ ಚಮಚ ಓಟ, ಪ್ರೌಢ ಶಾಲಾ ಮಟ್ಟದವರಿಗೆ ನಿಧಾನ ಸೈಕಲ್ ಚಾಲನೆ, ದಿವ್ಯಾಂಗಿಗಳಿಗೆ ಟೆನ್ನಿಸ್ ಬಾಲ್ ಎಸೆಯುವ ಸ್ಪರ್ಧೆ, ಪುರುಷ ಮತ್ತು ಮಹಿಳೆಯರಿಗೆ ನಿಧಾನ ಬೈಕ್ ಚಾಲನೆ, ಭಾರದ ಗುಂಡು ಎಸೆತ, ರಂಗೋಲಿ ಸ್ಪರ್ಧೆ, 100 ಮೀ. ಓಟ, ವಿಷದ ಚೆಂಡು, 40 ರಿಂದ 50 ವರ್ಷದವರಿಗೆ ಬಸ್ ಹುಡುಕಾಟ, 100 ಮೀ. ಓಟ, 50 ರಿಂದ 60 ವರ್ಷದವರಿಗೆ ಸಂಗೀತ ಕುರ್ಚಿ, 100 ಮೀ. ಓಟ, 60 ವರ್ಷ ಮೇಲ್ಪಟ್ಟವರಿಗೆ ನಡಿಗೆ ಸ್ಪರ್ಧೆ, ಬಕೆಟ್‍ಗೆ ಚೆಂಡು ಹಾಕುವುದು ಮುಂತಾದ ಸ್ಪರ್ಧೆಗಳು ನಡೆಯಲಿರುವುದಾಗಿ ವಿವರಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಅವರು ಮಾತನಾಡಿ, ನ.25 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಪ್ರತಿಭಾ ಮತ್ತು ಕ್ರೀಡಾ ಪುರಸ್ಕಾರ ಸಮಾರಂಭ ನಡೆಯಲಿದ್ದು, ಇದರಲ್ಲಿ ಜಿಲ್ಲೆಯ ವಿವಿಧ ಮಠಗಳ ಮಠಾಧೀಶರುಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. 2017-18, 2018-19ರ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.80 ಕ್ಕಿಂತ ಅಧಿಕ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಲ್ಲದೆ ಕ್ರೀಡಾಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಗೌರವಿಸಲಾಗುವುದು ಎಂದರು.
ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀಸದಾಶಿವ ಸ್ವಾಮೀಜಿಗಳು ಮಾತನಾಡಿ, ಜಿಲ್ಲೆಯಲ್ಲಿರುವ ವೀರಶೈವ ಸಮಾಜ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ವೀರಶೈವ ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕೆನ್ನುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಜಿಲ್ಲೆಯ ಎಲ್ಲಾ ವೀರಶೈವ ಸಮಾಜ ಬಾಂಧವರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂಭಶಿವ ಮೂರ್ತಿ ಹಾಗೂ ಖಜಾಂಚಿ ಉದಯ ಕುಮಾರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: