ದೇಶಪ್ರಮುಖ ಸುದ್ದಿ

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ: ಮರುಪರಿಶೀಲನಾ ಅರ್ಜಿ ವಿಸ್ತೃತ ಪೀಠಕ್ಕೆ ವರ್ಗಾವಣೆ

ನವದೆಹಲಿ,ನ.14- ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ನೀಡಿದ್ದ ತೀರ್ಪು ಮರುಪರಿಶೀಲನೆಗೆ ಕೋರಿದ್ದ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ಶಬರಿಮಲೆ ಮರು ಪರಿಶೀಲನಾ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದರು. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ನ್ಯಾ.ಎ.ಎಂ.ಖಾನ್ವಿಲ್ಕರ್, ನ್ಯಾ.ಇಂದೂ ಮಲ್ಹೋತ್ರಾ ಇದಕ್ಕೆ ಒಪ್ಪಿಕೊಂಡರೆ, ಉಳಿದ ಇಬ್ಬರು ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್ ಹಾಗೂ ಡಿ.ವೈ.ಚಂದ್ರಚೂಡ್ ಇದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ತೀರ್ಪು ನೀಡಿದರು.

ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಂಘರ್ಷದ ವಿಚಾರ ಇರುವುದರಿಂದ ಇನ್ನಷ್ಟು ಚರ್ಚೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಪೀಠ 7 ನ್ಯಾಯಮೂರ್ತಿಗಳಿರುವ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ.

ಶಬರಿಮಲೆಗೆ ಸಂಬಂಧಿಸಿದಂತೆ 2018ರ ಸೆಪ್ಚಂಬರ್ ನಲ್ಲಿ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಅಥವಾ ಮಾರ್ಪಾಡು ಸೂಚಿಸಿಲ್ಲ. ವಿಸ್ತೃತ ನ್ಯಾಯಪೀಠದ ವಿಚಾರಣೆ ಮುಗಿದು, ತೀರ್ಪು ಹೊರ ಬರುವವರೆಗೂ ಹಿಂದಿನ ತೀರ್ಪು ಊರ್ಜಿತದಲ್ಲಿರುತ್ತದೆ ಎಂದು ಹೇಳಿದೆ.

ಇನ್ನು, ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿಗಳು, ಮಹಿಳೆಯರ ಪ್ರವೇಶ ವಿಚಾರ ಕೇವಲ ಈ ದೇಗುಲಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಮಸೀದಿ ಹಾಗೂ ಪಾರ್ಸಿಗಳ ದೇಗುಲಕ್ಕೂ ಪ್ರವೇಶ ವಿಚಾರದ ಬಗ್ಗೆಯೂ ತೀರ್ಮಾನ ಮಾಡಬೇಕಿದೆ ಎಂದಿದ್ದಾರೆ.

ಶಬರಿಮಲೆಯ ಮಂಡಲ ಮಹೋತ್ಸವಕ್ಕಾಗಿ ನ.16 ರಿಂದ ಶಬರಿಮಲೆ ಬಾಗಿಲು ತೆರೆಯಲಿದ್ದು. ನ.27ಕ್ಕೆ ಮಂಡಲ ಪೂಜೆ ನಡೆಯಲಿದೆ. ಮಂಡಲ ಪೂಜೆ ಬಳಿಕ ಡಿ.27ಕ್ಕೆ ಬಾಗಿಲು ಮುಚ್ಚಲಿದ್ದು, ಮಕರ ಮಹೋತ್ಸವಕ್ಕಾಗಿ ಡಿ.30ರಂದು ಮತ್ತೆ ಬಾಗಿಲು ತೆರೆದು ಜ.20ಕ್ಕೆ ಕ್ಷೇತ್ರದ ಬಾಗಿಲು ಮುಚ್ಚಲಿದೆ. (ಎಂ.ಎನ್)

Leave a Reply

comments

Related Articles

error: