ಮೈಸೂರು

ಶಾಲಾ ಪಠ್ಯಪುಸ್ತಕ ಪರಿಷ್ಕರಣೆ “ ಬಹಿರಂಗ ಚರ್ಚೆ”ಗೆ ಆಹ್ವಾನ

ರಾಜ್ಯ ಸರ್ಕಾರ 2017-18ನೇ ಸಾಲಿನ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಶಿಕ್ಷಣ ತಜ್ಞರನ್ನು ನಿರ್ಲಕ್ಷ್ಯಿಸಿ ಕೈಗೊಂಡ ಏಕಮುಖ ನಿರ್ಧಾರವನ್ನು ಖಂಡಿಸಿ ವಿಚಾರಗೋಷ್ಠಿ ಹಾಗೂ ಬಹಿರಂಗ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ  ಎಂದು ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಸಿಂಧನಕೇರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಠ್ಯಪರಿಷ್ಕರಣೆ ವಿವಾದ ಏನು-ಎತ್ತ? ವಿಷಯವಾಗಿ ವಿಚಾರಗೋಷ್ಠಿಯನ್ನು ಮಾ.4ರ ಶನಿವಾರ ಸಂಜೆ 6ಕ್ಕೆ, ಮಾಧವ ಕೃಪಾದಲ್ಲಿ ಮಾಧ್ಯಮಿಕ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶೈಕ್ಷಿಕ ಸಂಘ ಸಂಯುಕ್ತವಾಗಿ ವಿಚಾರ ಗೋಷ್ಠಿ ಆಯೋಜಿಸಿದ್ದು, ವಿಧಾನ ಪರಿಷತ್ ಸದಸ್ಯ ಅರುಣ‍್ ಶಹಾಪುರ ವಿಚಾರ ಮಂಡಿಸುವರು, ಶಿವಮೊಗ್ಗ ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಅಧ್ಯಕ್ಷತೆ ವಹಿಸುವರು ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ಚರ್ಚೆಗೆ ಸರ್ಕಾರ ಹಿಂದೇಟು ಏಕೆ? ತರಾತುರಿಯಲ್ಲಿ ಪರಿಷ್ಕರಿಸಿರುವ ರಹಸ್ಯವೇನು? ದೇಶಭಕ್ತಿಯ ವಿಚಾರದಲ್ಲಿ ಪರ-ವಿರೋಧವೇಕೆ? ಎನ್ನುವ ವಿಷಯಾಧಾರಿತ ಬಹಿರಂಗ ಚರ್ಚೆ ನಡೆಯಲಿದ್ದು ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಕೋರಿದರು.

ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ಕರಡು ನೀತಿ ಜಾರಿಗೊಳಿಸಲಿದ್ದು ಈ ಸಂದರ್ಭದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಅನವಶ್ಯಕವೆಂದರು.

ಬೇಡಿಕೆಗಳು : ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಶಿಕ್ಷಕರನ್ನು ನೇಮಿಸದೆ ಕಾಲಹರಣ ಮಾಡುತ್ತಿದ್ದು ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಿ, ಅರ್ಹ ಶಿಕ್ಷಕರಿಗೆ ಮುಂಬಡ್ತಿ ನೀಡಿ,  ಡಿ.ಎಸ್.ಇ.ಆರ್.ಟಿ., ಸಿ.ಟಿ.ಇ ಮತ್ತು ಡಯಟ್‍ಗಳಲ್ಲಿ ನಡೆಸಿರುವ ಸಭೆಗಳು, ಚರ್ಚೆಗಳ ಬಗ್ಗೆ ಸವಿವರವನ್ನು ನೀಡಿ, 7ನೇ ವೇತನ ಅಯೋಗದ ಶಿಫಾರಸ್ಸನ್ನು ಜಾರಿಗೊಳಿಸಿ ಹಾಗೂ ಇತರೆ ಪ್ರಮುಖ ಬೇಡಿಕೆಗಳ ಪ್ರಸ್ತಾವನೆಯನ್ನು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ರಾಜಣ್ಣ ಹಾಗೂ ಜಿಲ್ಲಾಧ್ಯಕ್ಷ ಎಸ್.ನಂದೀಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: