ಮೈಸೂರು

ಹಾಡಿಯಲ್ಲಿ ಪುಟಾಣಿಗಳಿಂದ ಅರಳಿದೆ ಪರಿಸರ ಸ್ನೇಹಿ ಶಾಲೆ

ಶಾಲೆ ಅಂದಾಕ್ಷಣ ನೆನಪಿಗೆ ಬರೋದು ಮುಂದೆ ಒಂದು ದೊಡ್ಡ ಆಟದ ಮೈದಾನ. ಅದರಾಚೆ ಒಂದು ಸಣ್ಣ ವರಾಂಡ, ಅದರ  ಹಿಂದೆ ಕೆಲವು ಕೋಣೆಗಳು. ಆದರೆ ಈ ಶಾಲೆ ಭಿನ್ನವಾಗಿದೆ. ಶಾಲೆಯ ಪ್ರವೇಶದ್ವಾರದಲ್ಲೇ ಮುಗುಳ್ನಗುವ ಹೂಗಳು ಸ್ವಾಗತ ಕೋರುತ್ತವೆ, ಆವರಣ ಪ್ರವೇಶಿಸುತ್ತಿದ್ದಂತೆ ಅಕ್ಕಪಕ್ಕದಲ್ಲಿ ತಲೆದೂಗುತ್ತ ನಿಂತಿರುವ ಹಸಿರು ತರಕಾರಿಯ ಹಾಗೂ ಹಣ್ಣುಗಳ ಗಿಡಗಳು ನಿಜಕ್ಕೂ ಮನಸ್ಸಿಗೆ ಆಹ್ಲಾದವನ್ನು ನೀಡುತ್ತವೆ. ಕಾಂಕ್ರೀಟ್ ಮಯವಾಗಿರುವ ಇಂದಿನ ನಾಡಿನಲ್ಲಿ ಇಂಥಹದ್ದೊಂದು ಶಾಲೆ ಇರೋದಕ್ಕೆ ಸಾಧ್ಯನಾ ಹೀಗೊಂದು ಪ್ರಶ್ನೆ ಹುಟ್ಟಿದರೆ ಆಶ್ಚರ್ಯವಿಲ್ಲ. ಆದರೆ ಇಂಥಹದ್ದೊಂದು ಶಾಲೆಯಿದೆ.  ಅದು ಇರೋದು ಹಾಡಿಯಲ್ಲಿ. ಶಾಲೆ ಅಂದರೆ ಹೀಗಿರಬೇಕಪ್ಪ ಎನ್ನುವ ಒಂದು ಮಾದರಿ ಶಾಲೆ. ಅಂತಹ ಒಂದು ಮಾದರಿ ಶಾಲೆಯಾಗಿರುವುದರಿಂದಲೇ  ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿತು.

ಮೈಸೂರು ಜಿಲ್ಲೆಯ  ಹೆಚ್.ಡಿ.ಕೋಟೆ ತಾಲೂಕಿನ ಮಂಚೇಗೌಡನಹಳ್ಳಿ ಹಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊನ್ನೆಯಷ್ಟೇ ‘ಪರಿಸರ ಮಿತ್ರ ಶಾಲಾ ಪ್ರಶಸ್ತಿ’ ಪಡೆದು ಇಡೀ ಮೈಸೂರು ಜಿಲ್ಲೆಗೆ ಖ್ಯಾತಿ ತಂದಿದೆ. ಹಾಡಿಯಲ್ಲೊಂದು ಸುಂದರ ಪರಿಸರ ಸ್ನೇಹಿ ಶಾಲೆ ಎಂಬ ಶೀರ್ಷಿಕೆಯನ್ನು ಹೊತ್ತು ಸಂಭ್ರಮಿಸುತ್ತಿದೆ.

ಹೆಚ್.ಡಿ.ಕೋಟೆ ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಈ ಶಾಲೆಯ ಪರಿಸರ ಎಂತಹವರನ್ನು ನಿಬ್ಬೆರಗಾಗಿಸುತ್ತದೆ. ಶಾಲೆಯ ಪ್ರವೇಶ ದ್ವಾರದಲ್ಲೇ ಇರುವ ಹೂವಿನ ಚಪ್ಪರ ಬರುವವರೆಲ್ಲರಿಗೂ ಸ್ವಾಗತ ನೀಡುತ್ತದೆ. ಶಾಲೆಯ ಆವರಣದ ತುಂಬೆಲ್ಲಾ ಹಸಿರು ಗಿಡ ಮರಗಳು ಶಾಲೆಯ ವಾತಾವರಣವನ್ನು ತಂಪುಗೊಳಿಸುತ್ತವೆ. ಬಗೆಬಗೆಯ ಸೊಪ್ಪು-ತರಕಾರಿ ಗಿಡಗಳು, 60 ಕ್ಕಿಂತ ಹೆಚ್ಚು ಪರಂಗಿ ಹಣ್ಣಿನ ಸಸಿಗಳು, 30 ಕ್ಕಿಂತ ಹೆಚ್ಚು ಬಾಳೆಗಿಡಗಳು, ಔಷಧಿ ಸಸ್ಯಗಳು ಹೆಚ್ಚಾಗಿವೆ.

ಆರೋಗ್ಯ ಮತ್ತು ನೈರ್ಮಲ್ಯೀಕರಣ ಕಾಪಾಡಿಕೊಳ್ಳುವಲ್ಲಿ ಸ್ವಚ್ಛವಾದ ಶೌಚಾಲಯ ಹಾಗೂ ಅಡುಗೆ ಮನೆ ಇದೆ. ನೈಸರ್ಗಿಕವಾಗಿ ಸಿಗುವ ಗಾಳಿ, ಬೆಳಕನ್ನು ಹೆಚ್ಚಾಗಿ ಬಳಸಿಕೊಳ್ಳಲು ವಿಶಾಲವಾದ ಕಿಟಕಿ ಬಾಗಿಲುಗಳಿರುವ 2 ಬೋಧನಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮಳೆ ನೀರು ಸಂಗ್ರಹ ತೊಟ್ಟಿ, ಸೋಲಾರ್ ವ್ಯವಸ್ಥೆ, ಶಾಲೆಯಲ್ಲಿ ಉತ್ಪತ್ತಿಯಾದ ತ್ಯಾಜ್ಯ ವಸ್ತುಗಳಿಂದ ಗೊಬ್ಬರವನ್ನಾಗಿ ಪರಿವರ್ತಿಸಲು ಕಾಂಪೋಸ್ಟ್ ಗುಂಡಿಗಳು ಇವೆಲ್ಲವೂ ಪರಿಸರ ಸ್ನೇಹಿಯಾಗಿವೆ . ಅಲ್ಲದೇ ಮಾರುಕಟ್ಟೆಯಿಂದ ಯಾವುದೇ ತರಕಾರಿಗಳನ್ನು ತರದೇ ತಾವೇ ತಯಾರಿಸಿದ ಗೊಬ್ಬರದಿಂದ ಬೆಳೆದ ಹಣ್ಣು-ತರಕಾರಿಗಳನ್ನು ಬಿಸಿ ಊಟ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ.

ಇಂತಹ ಸುಂದರ ಶಾಲೆಯ ಪರಿಸರ ನಿರ್ಮಾಣ ಮಾಡುವುದು ಕಷ್ಟಸಾಧ್ಯವೇ ಸರಿ. ಈ ಯಶಸ್ಸಿನ ಹಿಂದೆ ಹಲವಾರು ಕಾಣದ ಕೈಗಳ ಶ್ರಮವಿದೆ. ಅಂತಹ ಕಾಣದ ಕೈಗಳಲ್ಲಿ ಅಲ್ಲಿನ ಶಾಲಾ ಶಿಕ್ಷಕ ಮಂಜುನಾಥ್ ಕೂಡ ಒಬ್ಬರು. ಸಿಟಿ ಟುಡೆಯೊಂದಿಗೆ ಮಾತನಾಡಿದ ಅವರು ತಮ್ಮ ಸಂತಸವನ್ನು ಹಂಚಿಕೊಂಡರು.  ನಾನು 2004 ರಲ್ಲಿ ಈ ಶಾಲೆಗೆ ಮೊದಲ ಬಾರಿಗೆ ಶಿಕ್ಷಕನಾಗಿ ನೇಮಕಗೊಂಡೆ. ಈ ಶಾಲೆಯ ಮೊದಲ ಶಿಕ್ಷಕ ನಾನೇ. ಜೇನುಕುರುಬ ಆದಿವಾಸಿ ಜನಾಂಗ ವಾಸಿಸುವ ಈ ಹಾಡಿಯಲ್ಲಿ ಆಗ ಮೂಲಭೂತ ಸೌಕರ್ಯಗಳೂ ಸಹ ಇರಲಿಲ್ಲ. ಈ ಶಾಲೆಯನ್ನು ತಲುಪಬೇಕಾದರೆ ಪ್ರತಿನಿತ್ಯ 3 ಕಿ.ಮೀ.ನಡೆದುಕೊಂಡು ಬರಬೇಕಿತ್ತು. ಹೆಂಚಿನ ಮನೆಯಲ್ಲಿ ಪಾಠ ಮಾಡುತ್ತಿದ್ದೆ. ನಂತರ ಶಿಕ್ಷಣ ಇಲಾಖೆಯ ಗಮನಕ್ಕೆ ತಂದ ಮೇಲೆ ವಿಶಾಲ ಕೊಠಡಿಗಳು, ಅಡುಗೆ ಮನೆ, ಶೌಚಾಲಯ, ಕಂಪೌಂಡ್ ನಿರ್ಮಾಣವಾದವು.

ಆದಿವಾಸಿಗಳಿಗೆ ಸ್ವಚ್ಛತೆಯ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ಅವರನ್ನು ಸಮಾಜಮುಖಿಯಾಗಿಸಲು ಪಣತೊಟ್ಟು ನಿಂತಿದ್ದೇನೆ. ಅವರ ಸೇವೆ ಮಾಡುವುದು ನನ್ನ ಪುಣ್ಯವೆಂದು ಭಾವಿಸಿದ್ದೇನೆ. 14 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಹಾಡಿ ಸಮುದಾಯದ ಜನರೂ ಸಹ ತುಂಬಾ ಸಹಾಯ ಮಾಡಿದ್ದಾರೆ. ಈ ಯಶಸ್ಸಿನಲ್ಲಿ ಅವರ ಶ್ರಮವೂ ಕೂಡ ಅಡಗಿದೆ. ಈ ಪ್ರಶಸ್ತಿ ಬಂದಿರುವುದರಿಂದ ಹಾಡಿಯ ಜನತೆಗೆ ಬಹಳ ಸಂತಸವಾಗಿದೆ. ಇದೆಲ್ಲದಕ್ಕೂ ನೀವೆ ಕಾರಣ ಎಂದು ಜನ ಹೇಳುವಾಗ ಬಹಳ ಖುಷಿಯಾಗುತ್ತದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ಪ್ರಸ್ತುತ ಈ ಶಾಲೆಯಲ್ಲಿ 18 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚಿಕ್ಕ ಶಾಲೆ ಚೊಕ್ಕ ಶಾಲೆ ಎಂದರೂ ತಪ್ಪಾಗಲಾರದು. ಮಂಜುನಾಥ್ ಅವರು ಶಾಲೆಯ ಅಭಿವೃದ್ಧಿಗೆ ಮಾತ್ರ ಶ್ರಮಿಸದೇ ಹಾಡಿ ಜನಾಂಗದಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನೂ ಸಹ ಮಾಡುತ್ತಿದ್ದಾರೆ. ಮುಖ್ಯವಾಗಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿ, ಅವರನ್ನು ಸಮಾಜಮುಖಿಯಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಹಾಡಿಯಲ್ಲಿ ಕಾಮಾಲೆ ರೋಗ ಕಂಡುಬಂದಾಗ ನಾಟಿ ಔಷಧಿ ಕೊಡಿಸಿ ಗುಣಮುಖರಾಗಿಸಿದ್ದರು. ಇದರಿಂದಾಗಿ ಗ್ರಾಮಸ್ಥರು ಅವರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಗುರುತರ ಜವಾಬ್ದಾರಿಯಿಂದ ಪ್ರಯತ್ನ ಮಾಡಿದಾಗ ಯಶಸ್ಸು ಸಿಗುತ್ತದೆ. ಅಂತೆಯೇ ಯಾವ ಸ್ವಾರ್ಥವೂ ಇಲ್ಲದೇ ಅತ್ಯಂತ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ. ಇದರಿಂದ ನನಗೆ ಆತ್ಮತೃಪ್ತಿ ಇದೆ ಎಂದು  ತಮ್ಮ ಮನದಲ್ಲಿನ ಭಾವವನ್ನು ಹೊರಹಾಕಿದರು.

ಎರಡಕ್ಷರಂ ಕಲಿಸಿದಾತಂ ಗುರು ಎಂದು ಹೇಳಿರುವುದು ಎಷ್ಟು ನಿಜ. ಕೇವಲ ಇಲ್ಲಿ ಅಕ್ಷರಕ್ಕಷ್ಟೇ ಮಹತ್ವವಲ್ಲ. ಅಕ್ಷರದ ಜೊತೆ ಮಕ್ಕಳು ಕೈತೋಟ ಮಾಡುವುದನ್ನೂ ಕಲಿತಂತಾಗಿದೆ. ಅಂದರೆ ಅವರಿಗೆ ಮುಂದಿನ ಜೀವನಕ್ಕೆ ಬೇಕಾದ ವಿದ್ಯೆಯನ್ನು ಇಲ್ಲಿನ ಶಿಕ್ಷಕರು  ನೀಡುತ್ತಿದ್ದಾರೆ. ಎಲ್ಲರೂ ಅವರವರ ಸ್ವಾರ್ಥವನ್ನಷ್ಟೇ ನೋಡಿಕೊಳ್ಳುವ, ಕೇವಲ ಕಲಿಸುವುದಕ್ಕೆ ಮಾತ್ರ ತಾನು ಬರುವುದು ಎಂಬಂತಿರುವ  ಇಂದಿನ ದಿನಗಳಲ್ಲಿನ  ಕೆಲವು ಶಿಕ್ಷಕರ ನಡುವೆ ಇಂತಹ ಶಿಕ್ಷಕರಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ. ಅಂಥಹವರಿಗೆ ಸಲಾಂ ಹೇಳಲೇಬೇಕು.

ಲತಾ.ಸಿ.ಜಿ.

Leave a Reply

comments

Related Articles

error: