ಕ್ರೀಡೆ

ಟೆಸ್ಟ್ ನ 2ನೇ ದಿನದಾಟ: ಶತಕದತ್ತ ಮಯಾಂಕ್ ಅಗರ್ವಾಲ್; ಊಟದ ವಿರಾಮಕ್ಕೆ ಭಾರತ 188/3

ಇಂದೋರ್‌,ನ.15-ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲೂ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಅಧಿಪತ್ಯ ಮೆರೆದಿದ್ದಾರೆ.

ಕರ್ನಾಟಕದ ಮಯಾಂಕ್ ಅಗರ್ವಾಲ್ ಶತಕದ ಸನಿಹದಲ್ಲಿದ್ದು, ಟೀಂ ಇಂಡಿಯಾ ಊಟದ ವಿರಾಮದ ಹೊತ್ತಿಗೆ ಭಾರತ 54 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದೆ. ಇದರೊಂದಿಗೆ 38 ರನ್‌ಗಳ ಮುನ್ನೆಡೆಗಳಿಸಿದೆ.

ಎರಡನೇ ದಿನದಾಟದ ಆರಂಭದಲ್ಲೇ ಚೇತೇಶ್ವರ ಪೂಜಾರ (54), ನಾಯಕ ವಿರಾಟ್ ಕೊಹ್ಲಿ (0) ವಿಕೆಟ್‌ಗಳು ಪತನವಾದರೂ ಮಯಾಂಕ್ ಅಗರ್ವಾಲ್, ಅಜಿಂಕ್ಯ ರಹಾನೆ ಮಹತ್ವದ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡಕ್ಕೆ ಆಸರೆಯಾದರು.

ಇದೀಗ ಕ್ರೀಸಿನಲ್ಲಿರುವ ಮಯಾಂಕ್ ಅಗರ್ವಾಲ್ (91*) ಶತಕದತ್ತ ಮುನ್ನುಗ್ಗುತ್ತಿದ್ದು ಇವರಿಗೆ ಅಜಿಂಕ್ಯ ರಹಾನೆ (35*) ಸಾಥ್ ನೀಡುತ್ತಿದ್ದಾರೆ. ರಹಾನೆ ಕೂಡ ಅರ್ಧಶತಕದ ಸನಿಹದಲ್ಲಿದ್ದಾರೆ.

86/1 ಎಂಬಲ್ಲಿದ್ದ ದಿನದಾಟ ಮುಂದುವರಿಸಿದ ಭಾರತಕ್ಕೆ ಆರಂಭದಲ್ಲೇ ಚೇತೇಶ್ವರ ಪೂಜಾರ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಅಲ್ಲದೆ ಕೆಲವೇ ಹೊತ್ತಿನಲ್ಲಿ ಅರ್ಧಶತಕ ಸಾಧನೆ ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಪೂಜಾರನ್ನು ಅಬು ಜಾಯೇದ್ ಹೊರದಬ್ಬಿದರು. ಇದರೊಂದಿಗೆ 91 ರನ್‌ಗಳ ಜತೆಯಾಟ ಮುರಿದು ಬಿತ್ತು. 72 ಎಸೆತಗಳನ್ನು ಎದುರಿಸಿದ ಪೂಜಾರ ಒಂಬತ್ತು ಬೌಂಡರಿಗಳಿಂದ 54 ರನ್ ಗಳಿಸಿದರು.

ಇನ್ನೊಂದೆಡೆ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಕರ್ನಾಟಕದ ಮಯಾಂಕ್ ಅಗರ್ವಾಲ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಈ ನಡುವೆ ಅಚ್ಚರಿಯೆಂಬಂತೆ ಎರಡು ಎಸೆತಗಳನ್ನು ಮಾತ್ರ ಎದುರಿಸಿದ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯುವಲ್ಲಿ ವಿಫಲವಾದರು. ಬಾಂಗ್ಲಾ ವೇಗಿ ಅಬು ಜಾಯೇದ್ ಪರಿಣಾಮಕಾರಿ ದಾಳಿ ಸಂಘಟಿಸುವ ಮೂಲಕ ಕೊಹ್ಲಿಯನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು.

ಮೊದಲು ಅಂಪೈರ್ ನಾಟೌಟ್ ನೀಡಿದರೂ ಡಿಆರ್‌ಎಸ್ ಮನವಿ ಮಾಡುವ ಮೂಲಕ ಕೊಹ್ಲಿರನ್ನು ಹೊರದಬ್ಬುವಲ್ಲಿ ಯಶಸ್ವಿಯಾದರು. ಇದರೊಂದಿಗೆ 119 ರನ್ ಗಳಿಸುವುದರೆಡೆಗೆ ಭಾರತದ ಮೂರನೇ ವಿಕೆಟ್ ಪತನವಾಯಿತು. ಈ ಎಲ್ಲ ಮೂರು ವಿಕೆಟ್‌ಗಳು ಅಬು ಜಾಯೇದ್ ಪಾಲಾಯಿತು. ಅತ್ತ ಮಯಾಂಕ್ ಅಗರ್ವಾಲ್ ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ ಒದಗಿಸುವಲ್ಲಿ ನೆರವಾದರು. ಇವರಿಗೆ ಉಪನಾಯಕ ಅಜಿಂಕ್ಯ ರಹಾನೆ ಉತ್ತಮ ಸಾಥ್ ನೀಡಿದರು.

ಏತನ್ಮಧ್ಯೆ ಕಲಾತ್ಮಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ ಮೈಲುಗಲ್ಲು ತಲುಪಿದರು. ತಮ್ಮ 104ನೇ ಇನ್ನಿಂಗ್ಸ್‌ನಲ್ಲಿ ರಹಾನೆ ಈ ದಾಖಲೆ ಬರೆದಿದ್ದಾರೆ.

ಮೊದಲ ದಿನದಾಟದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡರೂ ಕೇವಲ 150 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಪ್ರತ್ಯುತ್ತರವಾಗಿ ಭಾರತ ದಿನದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತ್ತು.

ಭಾರತೀಯ ವೇಗಿಗಳು ಸಂಪೂರ್ಣ ಅಧಿಪತ್ಯ ಸ್ಥಾಪಿಸಿದ್ದಾರೆ. ಮೊಹಮ್ಮದ್ ಶಮಿ ಮೂರು ವಿಕೆಟ್ ಕಬಳಿಸಿದರೆ ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಲಾ ಎರಡು ವಿಕೆಟುಗಳನ್ನು ಪಡೆದಿದ್ದಾರೆ. (ಎಂ.ಎನ್)

Leave a Reply

comments

Related Articles

error: