ಪ್ರಮುಖ ಸುದ್ದಿಮೈಸೂರು

ರಾಜ್ಯದಲ್ಲಿ ಇಷ್ಟೆಲ್ಲ ಬೆಳವಣಿಗೆ ನಡೆಯಲು ಕಾರಣ ವಿ. ಶ್ರೀನಿವಾಸಪ್ರಸಾದ್ : ಆಪರೇಷನ್ ಕಮಲ ಹೇಗಾಯ್ತು ಎಂಬುದನ್ನು ಬಾಯ್ಬಿಟ್ಟ ಮಾಜಿ ಸಚಿವ ಹೆಚ್.ವಿಶ್ವನಾಥ್

ಮೈಸೂರು,ನ.15:-  ಆಪರೇಷನ್ ಕಮಲ ಹೇಗಾಯ್ತು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಇಂದು ಬಾಯ್ಬಿಟ್ಟಿದ್ದಾರೆ. ನನ್ನನ್ನು ಪಕ್ಷಕ್ಕೆ ಕರೆದುಕೊಂಡು ಬಂದವರು ವಿ.ಶ್ರೀನಿವಾಸ್ ಪ್ರಸಾದ್. ಪ್ರಸಾದ್ ಮತ್ತು ನನ್ನ ಅವಿನಾಭಾವ ಸಂಬಂಧದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಕಾರಣವಾಯ್ತು ಎಂದು ಬಿಜೆಪಿ ಕಚೇರಿಯಲ್ಲಿ  ಹೇಳಿದರು.

ಬಿಜೆಪಿ ಸೇರ್ಪಡೆ ನಂತರ ಮೊದಲ ಭಾರಿಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಉಪಹಾರ ಸೇವಿಸಿದರು. ಬಳಿಕ ಬಿಜೆಪಿ ಕಚೇರಿಯಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಭಾಗಿಯಾದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಇಷ್ಟೆಲ್ಲ ಬೆಳವಣಿಗೆ ನಡೆಯಲು ಕಾರಣ ವಿ. ಶ್ರೀನಿವಾಸಪ್ರಸಾದ್. ಶ್ರೀನಿವಾಸಪ್ರಸಾದ್ ಮೂಲಕ ಬಿ.ಎಸ್. ಯಡಿಯೂರಪ್ಪ ನನಗೆ ಪಕ್ಷಕ್ಕೆ ಆಹ್ವಾನಿಸಿದರು. ಇಬ್ಬರು ಮೂವರು ಬರ್ತಾರೆ ಹೋಗ್ತಾರೆ, ನೀವು ಜೆಡಿಎಸ್ ಬಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೀವೇ ಮುಂದೆ ನಿಲ್ಲಬೇಕು ಎಂದು ಶ್ರೀನಿವಾಸಪ್ರಸಾದ್ ಕೇಳಿದರು. ಆವತ್ತು ಅವರ ಮನೆಯಲ್ಲೇ ಎಲ್ಲವೂ ತೀರ್ಮಾನವಾಗಿ ಹೋಯಿತು. ಪ್ರಸಾದ್ ಅಲ್ಲದೆ ಬೇರೆ ಯಾರು ಕೇಳಿದ್ದರೂ ನಾನು ಇದಕ್ಕೆ ಒಪ್ಪುತ್ತಿರಲಿಲ್ಲ ಎಂದರು.

ಜೆಡಿಎಸ್ ಪಕ್ಷದ ಕಚೇರಿ ಪಕ್ಷದ ಹೆಸರಿನಲ್ಲಿ ಇಲ್ಲ ಕುಟುಂಬದ ಹೆಸರಿನಲ್ಲಿದೆ. ಆದರೆ, ಮೈಸೂರಿನಲ್ಲಿ ಬಿಜೆಪಿ ಮುಖಂಡರೊಬ್ಬರು ತಾವು ದುಡಿದ ಹಣದಲ್ಲಿ ಪಕ್ಷಕ್ಕೆ ಕಚೇರಿ ಕಟ್ಟಿ ಕೊಟ್ಟಿರೋದು ಗ್ರೇಟ್. ರಾಜ್ಯದಲ್ಲಾದ ರಾಜಕೀಯ ಪಲ್ಲಟವನ್ನು ಯಾವ ಸಾಹಿತಿ, ರಾಜಕೀಯ ಚಿಂತಕ ಸರಿಯಾಗಿ ವಿಶ್ಲೇಷಿಸಲಿಲ್ಲ. ನಮ್ಮನ್ನು ಬಾಯಿಗೆ ಬಂದಂತೆ ಅನರ್ಹರು ,ಅಬ್ಬೆಪಾರಿಗಳು ಅಂತ ಕರೆದರು. ಇದು ನೋವು ತಂತು. ನಾವು ಪಕ್ಷಾಂತರಿಗಳಲ್ಲ. ಇದು ರಾಜಕೀಯ ಧೃವೀಕರಣ. ಜನ ಸ್ವೀಕಾರ ಮಾಡುತ್ತಾರೆ, ಮಾಡುವಂತ ಪರಿಸ್ಥಿತಿ ನಿರ್ಮಾಣ ಮಾಡುವಂತ ಕೆಲಸ ಜಿಲ್ಲಾ ಬಿಜೆಪಿಗಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿದ ನಮಗಾಗಿ ಕೆಲಸಮಾಡಬೇಕು. ಅಧಿಕಾರಕ್ಕೋಸ್ಕರ ತ್ಯಾಗ ಮಾಡಲಿಲ್ಲ. ರಾಜ್ಯದಲ್ಲಿ ರಾಕ್ಷಸ ರಾಜಕಾರಣ, ಜಾತಿ ರಾಜಕಾರಣ ಹೆಚ್ಚಾದಾಗ  ತ್ಯಾಗ ಮಾಡಲೇಬೇಕಾಯಿತು ಎಂದರು.

ದೇವರಾಜ ಅರಸು ಹೇಗೆ ಜಾತಿ ಇಲ್ಲದ ಜಾತಿಯಿಂದ ಬಂದರೋ. ಅದೇ ರೀತಿ ಮೋದಿ ಜಾತಿ ಇಲ್ಲದ ಜಾತಿಯಿಂದ ಬಂದಿದ್ದಾರೆ. ದೇವರಾಜ ಅರಸು ಜೊತೆ ಮೋದಿ ಅವರನ್ನು ಸಮೀಕರಣ ಮಾಡಿ ನೋಡಬೇಕು  ಎಂದರು.

ಈ ಸಂದರ್ಭ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: