ಪ್ರಮುಖ ಸುದ್ದಿಮೈಸೂರು

ಶಾಲೆ ಜಾಗದಲ್ಲಿ ಕಟ್ಟಡ ಕಟ್ಟಿಸಿ ಆದಾಯ ಮಾಡುವ ದುರುದ್ದೇಶ : ಪ್ರೊ.ನಂಜರಾಜ ಅರಸ್ ಬೇಸರ

ಮೈಸೂರು,ನ.15 : ನೈತಿಕತೆ ಪ್ರಚಾರವೇ ಪ್ರಮುಖ ಉದ್ದೇಶವಾಗಿರಬೇಕಾದ ರಾಮಕೃಷ್ಣ ಆಶ್ರಮ ಈಗ ಎನ್‌ಟಿಎಂಎಸ್ ಶಾಲೆ ಜಾಗ ಸ್ವಾಧೀನ ಪಡೆದು ಅದರಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಕಟ್ಟಡ ಕಟ್ಟಿಸಿ ಆದಾಯ ಪಡೆಯುವ ದುರುದ್ದೇಶ ಹೊಂದಿರುವ ಮೂಲಕ ತನ್ನ ಉದ್ದೇಶಕ್ಕೇ ಚ್ಯುತಿ ತಂದುಕೊಳ್ಳುತ್ತಿದೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಎನ್‌ಟಿಎಂಎಸ್ ಶಾಲೆ ಉಳಿಸಿ ಹೋರಾಟ ಸಮಿತಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ಆಶ್ರಮ ಕೇವಲ ವ್ಯವಹಾರ ಉದ್ದೇಶಕ್ಕಾಗಿ ಸ್ವಾಮಿ ವಿವೇಕಾನಂದರ ಹೆಸರು ಬಳಸಿಕೊಳ್ಳಲು ಮುಂದಾಗಿರುವುದು ದುರದೃಷ್ಟಕರ ಎಂದು ನುಡಿದರು.

ಅಲ್ಲದೆ, ಆಶ್ರಮದವರಿಗೆ ಆ ಶಾಲೆಯ ಇತಿಹಾಸವೇ ಗೊತ್ತಿಲ್ಲ. 1881 ರಲ್ಲಿ ವಾಣಿ ವಿಲಾಸ ಸನ್ನಿಧಾನದವರು ಮನೆಯಿಂದಲೇ ಹೊರಗೆ ಬರುತ್ತಿರದಿದ್ದ ಹೆಣ್ಣು ಮಕ್ಕಳಿಗಾಗಿ ಅರಮನೆ ಆವರಣದಲ್ಲಿ ಶಾಲೆ ಆರಂಭಿಸಿ, ಅದು ನಂತರ ಜಗನ್ಮೋಹನ ಅರಮನೆ ಹಿಂಭಾಗಕ್ಕೆ ಹೋಯಿತು. ಬಳಿಕ ಈಗಿನ ಕಟ್ಟಡಕ್ಕೆ ಬಂದಿತು.

ಇನ್ನು, ಸ್ವಾಮಿ ವಿವೇಕಾನಂದರು ಸಹಾ ಈಗಿನ ಎನ್‌ಟಿಎಂಎಸ್ ಶಾಲೆ ಕಟ್ಟಡದಲ್ಲಿ ಉಳಿದಿರಲಿಲ್ಲ. ರಾಮಕೃಷ್ಣ ಆಶ್ರಮದ ಸ್ವಾಮೀಜಿಯೊಬ್ಬರು ಬರೆದ ವಿವೇಕರ ಜೀವನ ಚರಿತ್ರೆಯಲ್ಲಿ ಶೇಷಾದ್ರಿ ಹೌಸ್‌ನಲ್ಲಿ ಅವರು ಉಳಿದಿದ್ದರು ಎಂದಿದೆ. ಕುವೆಂಪು ಅವರು ಸಹಾ ತಮ್ಮ ಪುಸ್ತಕದಲ್ಲಿ ವಿವೇಕಾನಂದರು ದಿವಾನರ ಅತಿಥಿಯಾಗಿದ್ದು, ಬಳಿಕ ರಾಜರಿಗೆ ಪರಿಚಯವಾಗಿ ಅರಮನೆ ಅತಿಥಿಯಾದರೆಂದು ಉಲ್ಲೇಖಿಸಿದ್ದಾರೆ.

ಇದಲ್ಲದೆ, ಶೇಷಾದ್ರಿ ಅಯ್ಯರ್ ಹೌಸ್‌ನ ಒಂದು ಮಹಡಿಯ ಕೊಠಡಿಯೊಂದರಲ್ಲಿ ವಿವೇಕಾನಂದರ ಭಾವಚಿತ್ರ ಇರಿಸಿ, ಅವರು ಇಲ್ಲಿ ತಂಗಿದ್ದರೆಂದು ಹೊರಗೆ ಫಲಕ ಹಾಕಲಾಗಿದೆ. ಆದರೆ ಆಶ್ರಮದವರು ಈ ಅಂಶಗಳನ್ನು ಕಡೆಗಣಿಸಿ, ಎನ್‌ಟಿಎಂಎಸ್ ಕಟ್ಟಡ ವಶಕ್ಕೆ ಪಡೆದು, ಹಣಕಾಸು ವ್ಯವಹಾರ ನಡೆಸಲು ಮುಂದಾಗಿದ್ದಾರೆಂದು ದೂರಿದರು.

ಜೊತೆಗೆ, ಶಾಲೆ ಉಳಿಸಿಕೊಳ್ಳಲು ನಡೆಸಿದ ಹೋರಾಟದಲ್ಲಿ ಹಲವಾರು ಸಂಘ ಸಂಸ್ಥೆಗಳು ಪಾಲ್ಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹಾ ಶಾಲೆಯನ್ನು ಹಾಗೆಯೇ ಉಳಿಸಿಕೊಳ್ಳಲು ಆದೇಶಿಸಿದ್ದರೂ, ಅಧಿಕಾರಿಗಳ ಸಭೆಯೊಂದರಲ್ಲಿ ಈಗಿನ ಸಂಸದ ಪ್ರತಾಪ್‌ಸಿಂಹ, ಆ ಆದೇಶ ಒತ್ತಟ್ಟಿಗಿಟ್ಟು ಆಶ್ರಮಕ್ಕೆ ಶಾಲೆ ಜಾಗ ಹಸ್ತಾರಿಸುವಂತೆ ತಿಳಿಸುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಸ.ರ. ಸುದರ್ಶನ ಮಾತನಾಡಿ, ಇನ್ನು ಮುಂದೆ ಈ ಶಾಲೆ ಉಳಿಸಲು ಹೋರಾಟ ನಡೆಸಲು ಕನ್ನಡ ಶಾಲೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು.

ಕರುಣಾಕರ್, ಕೆ.ಸಿ. ಪುಟ್ಟಸಿದ್ದಶೆಟ್ಟಿ, ಹೊಸಕೋಟೆ ಬಸವರಾಜು, ನಂದೀಶ್, ಅರವಿಂದ ಶರ್ಮ  ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: