ಪ್ರಮುಖ ಸುದ್ದಿ

ನಗರಸಭೆಯ ಶವಯಾತ್ರೆ : ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ವಿನೂತನ ಪ್ರತಿಭಟನೆ

ರಾಜ್ಯ( ಮಡಿಕೇರಿ) ನ. 15 : – ಮಡಿಕೇರಿ ನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಮಡಿಕೇರಿ ರಕ್ಷಣಾ ವೇದಿಕೆ ಸಂಘಟನೆ ನಗರಸಭೆಯ ಶವಯಾತ್ರೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿತು.
ಸಾರ್ವಜನಿಕರು ಹಾಗೂ ವೇದಿಕೆಯ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ನಗರಸಭೆಯ ಅಣಕು ಶವಯಾತ್ರೆ ನಡೆಸಿ ಅಸಮಾಧಾನದ ಘೋಷಣೆಗಳನ್ನು ಕೂಗಿದರು.
ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ, ಕಸ ವಿಲೇವಾರಿ, ಒಳಚರಂಡಿ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಈ ಕುರಿತು ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು ನಗರಸಭೆಯ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಗರಸಭೆಯ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ. ನೌಕರರ ಕೊರತೆಯೊಂದಿಗೆ ಶುಚಿತ್ವದ ಕೊರತೆಯೂ ಎದುರಾಗಿದೆ. ಗುಂಡಿಬಿದ್ದ ರಸ್ತೆಗಳು, ಪಾಕಿಂರ್ಗ್ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದರೂ ಅಧಿಕಾರಿಗಳು ಮಾತ್ರ ಜಾಣ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ಸ್ಟೋನ್‍ಹಿಲ್ ಭಾಗದಲ್ಲಿ ಅವೈಜ್ಞಾನಿಕ ರೂಪದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಟೈಂ ಬಾಂಬ್‍ನಂತೆ ತ್ಯಾಜ್ಯ ಜನರನ್ನು ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಮಡಿಕೇರಿ ನಗರ ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ನಗರದ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿ ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಲಾಗಿದೆ. ಇನ್ನಾದರೂ ನಗರಸಭೆ ನಿದ್ದೆಯಿಂದ ಎಚ್ಚೆತ್ತು ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಉಪಾಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ಅಜಿತ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಹರೀಶ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕರ್ಕೆರ, ಖಜಾಂಚಿ ಉಮೇಶ್, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ, ಪ್ರಮುಖರಾದ ಸತ್ಯ, ದಿನೇಶ್ ನಾಯಕ್ ಮತ್ತಿತರರು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: