ಮೈಸೂರು

“ಪ್ರಜಾಪ್ರಭುತ್ವದ ಉಳಿವಿಗಾಗಿ ಮೀಸಲಾತಿ ಉಳಿಸೋಣ” ಜನಜಾಗೃತಿ ಪ್ರತಿಭಟನೆ

“ಪ್ರಜಾಪ್ರಭುತ್ವದ ಉಳಿವಿಗಾಗಿ ಮೀಸಲಾತಿ ಉಳಿಸೋಣ” ಜನಜಾಗೃತಿ ಪ್ರತಿಭಟನೆಯನ್ನು ಬಹುಜನ ವಿದ್ಯಾರ್ಥಿ ಸಂಘದಿಂದ ಮಾ.4ರ ಬೆಳಿಗ್ಗೆ 10ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಲಾಗಿದೆ ಎಂದು ಡಾ.ಶಿವಕುಮಾರ್ ತಿಳಿಸಿದರು.

ಬಹುಜನ ವಿದ್ಯಾರ್ಥಿ ಸಂಘದ 15ನೇ ವರ್ಷಾಚರಣೆ ಹಾಗೂ ರಾಜ್ಯಮಟ್ಟದ ಬೃಹತ್ ವಿದ್ಯಾರ್ಥಿ ಸಮ್ಮೇಳನವನ್ನು ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ಹಾಗೂ ಜೆ.ಎನ್.ಯು ನಜೀಬ್‍ ಅಹ್ಮದ್ ಅವರ ಸಹೋದರ ಮೊಹಮದ್ ಮಜೀಬ್ ಅಹ್ಮದ್ ಅವರು ಚಾಲನೆ ನೀಡುವರು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಪತ್ರಕರ್ತ ಅಬ್ದುಸಲಾಮ್ ಪುತ್ತಿಗೆ, ಬಹುಜನ ಸಮಾಜ ಪಕ್ಷದ ಮಾರಸಂದ್ರ ಮುನಿಯಪ್ಪ, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀಧರ ಪ್ರಭು ಹಾಗೂ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಇದೇ ಸಂದರ್ಭ ವಿಜಯಾ ಮಹೇಶ್‍ ಅವರ ‘ವಿಜಯ ಲಹರಿ ಭಾಗ-1, 2 ಹಾಗೂ ಡಾ.ಶಿವಕುಮಾರ್ ಅವರ ‘ನೋಟು ನಿಷೇಧ : ಸತ್ಯವೆಷ್ಟು, ಸುಳ್ಳೆಷ್ಟು ? ಮತ್ತು “ಮನುವಾದಿಗಳು ದೇಶಭಕ್ತರಾದದ್ದು ಯಾವಾಗ” ಎನ್ನುವ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು ಎಂದರು.

ಸುಪ್ರೀಂ ಕೋರ್ಟ್‍ನ ಬಡ್ತಿ ಮೀಸಲಾತಿ ವಿರೋಧಿ ತೀರ್ಪಿನಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದ್ದು ಅದನ್ನು ವಿರೋಧಿಸಿ ಪ್ರಸ್ತುತ ಸಂವಿಧಾನದಲ್ಲಿ ಮೀಸಲಾತಿ ನಿಯಮವಿದ್ದರೂ ಹಲವಾರು ಕ್ಷೇತ್ರದಲ್ಲಿ ದಲಿತರಿಗೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ 2002ರ ಬಡ್ತಿ ಮೀಸಲಾತಿ ರದ್ದುಗೊಳಿಸಿದ್ದರಿಂದ 16 ಸಾವಿರ ಎಸ್ಸಿ, ಎಸ್ಟಿ ನೌಕರರಿಗೆ ಹಿಂಬಡ್ತಿ ಆಗಿರುವುದನ್ನು ಖಂಡಿಸಿದರು. ಸರ್ಕಾರ ತೀರ್ಪಿನ ಪುನರ್ ಪರಿಶೀಲನೆ ಅರ್ಜಿ ದಾಖಲಿಸದೆ ತಾತ್ಸಾರ ಮನೋಭಾವ ತೊರಿದೆ. ಹಿಂದುಳಿದ ವರ್ಗಗಳನ್ನು ನಿರ್ಲಕ್ಷ್ಯಸುತ್ತಿದೆ ಎಂದು ಟೀಕಿಸಿದರು.

ಮೈಸೂರು ಪ್ರಾಂತ್ಯದ ಸಂಯೋಜಕ ಸೋಸಲೆ ಸಿದ್ದರಾಜು, ಹೆಚ್.ಎಸ್.ಗಣೇಶ್ ಮೂರ್ತಿ, ಜಿಲ್ಲಾಧ್ಯಕ್ಷ ನವೀನ್ ಮೌರ್ಯ, ಗಂಗೋತ್ರಿ ಘಟಕದ ಹೂವಿನ ಸಿದ್ದ, ಹೇಮಂತ್ ಕುಮಾರ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: