ಕ್ರೀಡೆ

ಬಾಂಗ್ಲಾ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಹಾಗೂ 130 ರನ್ ಗಳ ಜಯ

ಇಂದೋರ್,ನ.16- ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 130 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಮೂರನೇ ದಿನದಾಟದಲ್ಲೇ ಭಾರತ ಸ್ಮರಣೀಯ ಗೆಲುವು ದಾಖಲಿಸಿದೆ.

ಅಲ್ಲದೆ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಆರನೇ ಗೆಲುವನ್ನು ಬಾರಿಸಿದೆ.

ಇದರೊಂದಿಗೆ ನ.24ರಂದು ಕೋಲ್ಕೊತ್ತಾ ಈಡನ್ ಗಾರ್ಡನ್ ಮೈದಾನದಲ್ಲಿರುವ ನಡೆಯಲಿರುವ ಭಾರತದ ಚೊಚ್ಚಲ ಹಾಗೂ ಐತಿಹಾಸಿಕ ಡೇ ನೈಟ್ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಭರ್ಜರಿ ಪೂರ್ವ ಸಿದ್ಧತೆಯನ್ನೇ ನಡೆಸಿದೆ.

ಬಾಂಗ್ಲಾದೇಶದ 150 ರನ್‌ಗಳಿಗೆ ಉತ್ತರವಾಗಿ ಭಾರತ ತಂಡವು ಬಲಗೈ ಆರಂಭಿಕ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕದ (243) ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ನಷ್ಟಕ್ಕೆ 493 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 343 ರನ್‌ಗಳ ಬೃಹತ್ ಮುನ್ನಡೆ ದಾಖಲಿಸಿತ್ತು.

ಬಳಿಕ ಭಾರತೀಯ ಬೌಲರ್‌ಗಳ ಸಾಂಘಿಕ ದಾಳಿಗೆ ಕುಸಿದ ಅನುಭವಿಸಿದ ಬಾಂಗ್ಲಾ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕೇವಲ 213 ರನ್‌ಗಳಿಗೆ ಸರ್ವಪತನವನ್ನು ಕಂಡಿತು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 10ನೇ ಬಾರಿಗೆ ಇನ್ನಿಂಗ್ಸ್ ಗೆಲುವು ಬಾರಿಸಿದೆ. ಈ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಒಟ್ಟಾರೆಯಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 300 ಅಂಕಗಳೊಂದಿಗೆ ಭಾರತ ತಂಡ ಅಜೇಯ ಓಟವನ್ನು ಮುಂದುವರಿಸಿದೆ.

ಎರಡನೇ ದಿನದಾಟಕ್ಕೆ ಭಾರತ ಆರು ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿತ್ತು. ಮೂರನೇ ದಿನದ ಆರಂಭದಲ್ಲೇ ಬ್ಯಾಟಿಂಗ್ ಮುಂದುವರಿಸಲು ಬಯಸದ ಭಾರತ ಡಿಕ್ಲೇರ್ ಘೋಷಿಸಿತು.

ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಭಾರತೀಯ ಬೌಲರ್‌ಗಳಾದ ಇಶಾಂತ್ ಶರ್ಮಾ, ಉಮೇಶ್ ಯಾದವ್ ಮಗದೊಮ್ಮ ಪರಿಣಾಮಕಾರಿ ದಾಳಿ ಸಂಘಟಿಸಿದ್ದರು. ಅಲ್ಲದೆ 16 ರನ್ ಗಳಿಸುವಷ್ಟರಲ್ಲಿ ಓಪನರ್‌ಗಳಾದ ಶದ್ಮಾನ್ ಇಸ್ಲಾಂ (6), ಇಮ್ರುಲ್ ಕೇಯ್ಸ್‌ರನ್ನು (6) ಹೊರದಬ್ಬಿದರು. ಮೊದಲ ಇನ್ನಿಂಗ್ಸ್‌ನಲ್ಲೂ ಇವರಿಬ್ಬರು ಇಶಾಂತ್ ಹಾಗೂ ಉಮೇಶ್ ದಾಳಿಯಲ್ಲೇ ತಲಾ ಆರು ರನ್ ಗಳಿಸಿ ಔಟಾಗಿದ್ದರು.

ನಾಯಕ ಮೊಮಿನುಲ್ ಹಕ್ (7) ಅವರನ್ನು ಮೊಹಮ್ಮದ್ ಶಮಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಮೊಹಮ್ಮದ್ ಮಿಥುನ್ (18) ಸಹ ಶಮಿ ದಾಳಿಯಲ್ಲೇ ಕೆಟ್ಟ ಶಾಟ್‌ಗೆ ಬಲಿಯಾದರು. ಇದರೊಂದಿಗೆ 44 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಪತನಗೊಂಡವು. ಊಟದ ವಿರಾಮದ ವೇಳೆಗೆ ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್‌ನಲ್ಲಿ 22 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತ್ತು.

ಊಟದ ವಿರಾಮದ ಬಳಿಕವೂ ಬಾಂಗ್ಲಾ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಮೊಹಮ್ಮದ್ ಶಮಿ ದಾಳಿಯಲ್ಲಿ ರೋಹಿತ್ ಶರ್ಮಾ ಕೈಗಳಿಗೆ ಕ್ಯಾಚಿತ್ತ ಮಹಮುದುಲ್ಲಾ (15) ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ 72 ರನ್ ಗಳಿಸುವಷ್ಟರಲ್ಲಿ ಅರ್ಧ ತಂಡವು ಪೆವಿಲಿಯನ್‌ಗೆ ಸೇರಿತು.

ಈ ಮಧ್ಯೆ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಲಿಟನ್ ದಾಸ್ ಕೆಲ ಹೊತ್ತು ಪ್ರತಿ ಹೋರಾಟ ನೀಡಿದರು. ಆದರೆ ರವಿಚಂದ್ರನ್ ಅಶ್ವಿನ್ ತಮ್ಮದೇ ದಾಳಿಯಲ್ಲಿ ಕ್ಯಾಚ್ ಔಟ್ ಮಾಡುವ ಮೂಲಕ ಲಿಟನ್ ಹೋರಾಟಕ್ಕೆ ಅಂತ್ಯ ಹಾಡಿದರು. 39 ಎಸೆತಗಳನ್ನು ಎದುರಿಸಿದ ಲಿಟನ್ ಆರು ಬೌಂಡರಿಗಳಿಂದ 35 ರನ್ ಗಳಿಸಿದರು. ಅತ್ತ ಏಕಾಂಗಿ ಹೋರಾಟ ಮುಂದುವರಿಸಿದ ಅನುಭವಿ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಂ ಅರ್ಧಶತಕ ಸಾಧನೆ ಮಾಡಿದರು. ರಹೀಂ ಅರ್ಧಶತಕವು 101 ಎಸೆತಗಳಲ್ಲಿ ದಾಖಲಾಗಿದ್ದವು.

ಮುಷ್ಫಿಕರ್ ರಹೀಂಗೆ ಉತ್ತಮ ಸಾಥ್ ನೀಡಿದ ಮೆಹಿದಿ ಹಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದರು. ಟೀ ವಿರಾಮದ ಹೊತ್ತಿಗೆ ಬಾಂಗ್ಲಾದೇಶ 54 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು.

ಟೀ ವಿರಾಮದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಮೆಹಿದಿ ಹಸನ್‌ರನ್ನು (38) ಬಲಗೈ ವೇಗಿ ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ 59 ರನ್‌ಗಳ ಜತೆಯಾಟವು ಮುರಿದು ಬಿತ್ತು. 55 ಎಸೆತಗಳನ್ನು ಎದುರಿಸಿದ ಮೆಹಿದಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 38 ರನ್ ಗಳಿಸಿದರು.

ಹೀಗೆ ಟೀಂ ಇಂಡಿಯಾ ಬೌಲರ್ ಗಳು ಬಾಂಗ್ಲಾ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಭಾರತದ ಪರ ಮೊಹಮ್ಮದ್ ಶಮಿ 4, ರವಿಚಂದ್ರನ್ ಅಶ್ವಿನಿ 3, ಉಮೇಶ್ ಯಾದವ್ 2, ಇಶಾಂತ್ ಶರ್ಮಾ ಒಂದು ವಿಕೆಟ್ ಕಬಳಿಸಿದರು. (ಎಂ.ಎನ್)

Leave a Reply

comments

Related Articles

error: