ದೇಶಪ್ರಮುಖ ಸುದ್ದಿ

47ನೇ ಸಿಜೆಐ ಆಗಿ ಎಸ್.ಎ.ಬೋಬ್ಡೆ ಪ್ರಮಾಣ ವಚನ ಸ್ವೀಕಾರ

ನವದೆಹಲಿ,ನ.18-ಸುಪ್ರೀಂ ಕೋರ್ಟ್ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಶರದ್ ಅರವಿಂದ್ ಬೋಬ್ಡೆ (ಎಸ್.ಎ.ಬೋಬ್ಡೆ) ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಎಸ್.ಎ.ಬೋಬ್ಡೆ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

ಅಯೋಧ್ಯೆ ವಿವಾದ ಕುರಿತು ಮಹತ್ವದ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಭಾನುವಾರ ನಿವೃತ್ತಿಗೊಂಡ ಬಳಿಕ ಇಂದು ಬೋಬ್ಡೆ ಪ್ರಮಾಣ ವಚನ ಸ್ವೀಕರಿಸಿದರು.

ಮುಂದಿನ 17 ತಿಂಗಳುಗಳ ಕಾಲ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸ್ಥಾನವನ್ನು ಹೊಂದಲಿರುವ ಜಸ್ಟೀಸ್ ಎಸ್.ಎ ಬೋಬ್ಡೆ ಅವರ ಆಧಿಕಾರ ಅವಧಿ 2021ರ ಏಪ್ರಿಲ್ 23ಕ್ಕೆ ಮುಕ್ತಾಯಗೊಳ್ಳಲಿದೆ.

ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಐತಿಹಾಸಿಕ ಅಯೋಧ್ಯೆ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಐವರು ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿದ್ದರು. ಇದಲ್ಲದೆ, ಸುಪ್ರೀಂಕೋರ್ಟ್​ನ ನಿರ್ಗಮಿತ ಸಿಜೆಐ ರಂಜನ್​ ಗೊಗೊಯ್​ ಅವರ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಆರೋಪದ ಆಂತರಿಕ ತನಿಖಾ ತಂಡದ ನೇತೃತ್ವ ವಹಿಸಿದ್ದರು.

ಜಸ್ಟೀಸ್ ಎಸ್‌.ಎ.ಬೋಬ್ಡೆ ಮಹಾರಾಷ್ಟ್ರ ಮೂಲದವರಾಗಿದ್ದು ಪ್ರಖ್ಯಾತ ಹಿರಿಯ ವಕೀಲ ಅವರಿಂದ್ ಶ್ರೀನಿವಾಸ್ ಬೋಬ್ಡೆ ಅವರ ಪುತ್ರರಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: