ಮೈಸೂರು

ಉಪ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಅಕ್ರಮ ಹಾಗೂ ಅಕ್ರಮ ತಡೆಯುವಲ್ಲಿ ಜಿಲ್ಲಾಡಳಿತದ ವೈಫಲ್ಯದ ಖಂಡಿಸಿ ಪ್ರತಿಭಟನೆ

ಮೈಸೂರು,ನ.18:-  ಹುಣಸೂರು ಉಪ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಅಕ್ರಮ ಹಾಗೂ ಅಕ್ರಮ ತಡೆಯುವಲ್ಲಿ ಜಿಲ್ಲಾಡಳಿತದ ವೈಫಲ್ಯದ ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ  ಡಿ.5ರಂದು ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ನವೆಂಬರ್ 11ರಿಂದ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದರೆ ಚುನಾವಣೆ ಪಾರದರ್ಶಕವಾಗಿ ನಡೆಯುವುದು ಅನುಮಾನ. ಬಿಜೆಪಿ ಮುಖಂಡರುಗಳು ಮತ್ತು ಮುಖ್ಯಮಂತ್ರಿಗಳು ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಯೋಜನೆಗಳನ್ನು ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ಘೋಷಿಸುತ್ತಿದ್ದಾರೆ. ಮತದಾರರಿಗೆ ಹಂಚಲು ಹಲವಾರು ವಸ್ತುಗಳನ್ನು ಸಿದ್ಧಪಡಿಸಿಕೊಟ್ಟುಕೊಂಡಿದ್ದು ಮೈಸೂರಿನಲ್ಲಿ 30,000ಸೀರೆಗಳು ಸಿಕ್ಕಿದೆ. ಚುನಾವಣಾಧಿಕಾರಿಗಳು ಯಾರಿಗೂ ಹೆದರದೆ ನ್ಯಾಯೋಚಿತವಾಗಿ ಚುನಾವಣೆ ನಡೆಸುವಂತೆ ಒತ್ತಾಯಿಸಿದರು.

30ಸಾವಿರ ಸೀರೆಗಳನ್ನು ವಶಪಡಿಸಿಕೊಂಡಿರುವುದರಿಂದ ಎಫ್ ಐ ಆರ್ ದಾಖಲಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾವಣೆ ನಡೆಸುತ್ತಿರುವ ಅಧಿಕಾರಿಗಳಿಗೆ ಬಿಜೆಪಿ ಮುಖಂಡರಿಂದ ಮತ್ತು ಕರ್ನಾಟಕ ಸರ್ಕಾರದಿಂದ ನೇರವಾಗಿ ಬೆದರಿಕೆ ಇರುವುದರಿಂದ ಅತಿ ಸೂಕ್ಷ್ಮ ಕ್ಷೇತ್ರಗಳೆಂದು ಪರಿಗಣಿಸಿ ಹೆಚ್ಚಿನ ಸಂಖ್ಯೆಯ ಹೊರರಾಜ್ಯಗಳ ವೀಕ್ಷಕರುಗಳನ್ನು ನೇಮಿಸಬಾಕು. ಹುಣಸೂರು ಮತ್ತು ಇತರ ಕ್ಷೇತ್ರಗಳಿಗೆ ಒಳಬರುವ ಎಲ್ಲಾ ಪ್ರವೇಶ ದಾರಿಗಳಲ್ಲಿ ಸಿಆರ್ ಪಿ.ಎಫ್ ಸೈನಿಕರನ್ನು ನಿಯೋಜಿಸಬೇಕು. ಹುಣಸೂರು ಕ್ಷೇತ್ರವನ್ನು ಸಂಪೂರ್ಣವಾಗಿ ಸಿಆರ್ ಪಿಎಫ್ ಪೊಲೀಸರ ವ್ಯಾಪ್ತಿಗೆ ನೀಡಬೇಕು. ಎಲ್ಲಾ ರೀತಿಯ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಕ್ಷೇತ್ರದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ನಂತರ ಕೆಲ ವ್ಯಕ್ತಿಗಳು ಬೇರೆ ಜಿಲ್ಲೆಗಳಿಂದ ಬಂದಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಎಲ್ಲಾ ಪ್ರವೇಶ ದಾರಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ವಿಡಿಯೋ ರೆಕಾರ್ಡ್ ಆಗಬೇಕು. ಚುನಾವಣಾ ನೀತಿಸಂಹಿತೆಯನ್ನು ಪಾಲಿಸದ ಅಧಿಕಾರಿಗಳನ್ನು ಮತ್ತು ಪೊಲೀಸರನ್ನು ತಕ್ಷಣವೇ ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಕರ್ನಾಟಕದಲ್ಲಿ ಉಪಚುನಾವಣೆಗಳು ಪಾರದರ್ಶಕವಾಗಿರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ  ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ,ಕೆಪಿಸಿಸಿ ರಾಜ್ಯ ವಕ್ತಾರ ಎಂ ಲಕ್ಷ್ಮಣ್, ಕಾಡನಹಳ್ಳಿ ಕೆ ಪಿ ಚಿಕ್ಕಸ್ವಾಮಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ವೆಂಕಟೇಶ್, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ , ಮಾಜಿ ಮೇಯರ್ ಮೋದಾಮಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: