ಕ್ರೀಡೆ

ವಿಂಡೀಸ್ ವಿರುದ್ಧದ 4ನೇ ಟಿ20: ಭಾರತೀಯ ವನಿತೆಯರಿಗೆ 5 ರನ್ ಗಳ ಜಯ

ಗಯಾನ,ನ.18- ವೆಸ್ಟ್‌ಇಂಡೀಸ್ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತೀಯ ವನಿತೆಯರು 5 ರನ್ ಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

ಐದು ಪಂದ್ಯಗಳ ಸರಣಿಯನ್ನು 4-0 ಅಂತರದ ಜಯಿಸಿರುವ ಭಾರತ ತಂಡ ಸರಣಿ ಕ್ಲೀನ್‌ಸ್ವೀಪ್‌ ಮಾಡುವ ಆಲೋಚನೆಯಲ್ಲಿದೆ.

ಮಳೆ ಹಾಗೂ ಕೆಟ್ಟ ಹವಾಮಾನದಿಂದಾಗಿ 9 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡವು 7 ವಿಕೆಟ್ ನಷ್ಟಕ್ಕೆ 50 ರನ್ ಪೇರಿಸಿತು.

51 ರನ್ ಗಳ ಗುರಿ ಬೆನ್ನತ್ತಿದ್ದ ವಿಂಡೀಸ್ ತಂಡ 5 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ನಿಖರ ದಾಳಿ ಸಂಘಟಿಸಿದ ಅನುಜಾ ಪಾಟೀಲ್ 8 ರನ್ ತೆತ್ತು 8 ವಿಕೆಟ್ ಕಿತ್ತು ಮಿಂಚಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದಲ್ಲಿ ಪೂಜಾ ವಸ್ತ್ರಾಕರ್ 10 ರನ್ ಗಳಿಸಿರುವುದನ್ನು ಹೊರತುಪಡಿಸಿದರೆ ಇತರ ಯಾವ ಬ್ಯಾಟ್ಸ್‌ವುಮೆನ್‌ಗಳು ಎರಡಂಕಿಯನ್ನು ತಲುಪಲು ಸಾಧ್ಯವಾಗಲಿಲ್ಲ. ವಿಂಡೀಸ್ ಪರ ಹೇಯ್ಲೆ ಮ್ಯಾಥ್ಯೂಸ್ 3, ಆಫಿ ಫ್ಲೆಚರ್, ಶೆನೆಟ ಗ್ರಿಮ್ಮಾಂಡ್ ತಲಾ 2 ವಿಕೆಟುಗಳನ್ನು ಕಬಳಿಸಿದರು.

ಮೊದಲ ಟಿ20 ಪಂದ್ಯದಲ್ಲಿ ಭಾರತ 84 ರನ್ ಗಳ ಅಂತರದಲ್ಲಿ, ದ್ವಿತೀಯ ಟಿ20 ಪಂದ್ಯದಲ್ಲಿ 10 ವಿಕೆಟ್ ಗಳ, ತೃತೀಯ ಟಿ20ಯಲ್ಲಿ 7 ವಿಕೆಟ್ ಗಳ, ನಾಲ್ಕನೇ ಟಿ20ಯಲ್ಲಿ 5 ರನ್ ಅಂತರದ ಗೆಲುವು ದಾಖಲಿಸಿದೆ.

ಟಿ-20 ಸರಣಿಗೂ ಮೊದಲು ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಭಾರತ 2-1ರ ಅಂತರದ ಗೆಲುವು ದಾಖಲಿಸಿತ್ತು. ಇದೀಗ ನಡೆಯಲಿರುವ ಕೊನೆಯ ಟಿ20 ಪಂದ್ಯವು ಗಯಾನದಲ್ಲೇ ನ.20 ರಂದು ನಡೆಯಲಿದೆ. (ಎಂ.ಎನ್)

Leave a Reply

comments

Related Articles

error: